ಮಂಗಳೂರು : ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪ್ರಚೋದನಕಾರಿ ಸಂದೇಶ ಹರಿಬಿಟ್ಟಿದ್ದ ಹಾಗೂ ಬಜಪೆ ಪೊಲೀಸರನ್ನು ಅವಹೇಳನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು, ಕಾಟಿಪಾಳ್ಳ ನಿವಾಸಿ ಅಭಿಷೇಕ್ ಎಂ(23) ಬಂಧಿತ ಆರೋಪಿ.
mr_a_titude ಎಂಬ ಇನ್ಸ್ಟಾಗ್ರಾಮ್ ಪೇಜ್ ಮುಖಾಂತರ ಹೋಟೆಲ್ ನಿಸರ್ಗ ಎಂಬ ಫೋಟೋವನ್ನು ಹಾಕಿ ಅದರ ಮೇಲೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣದ ಆರೋಪಿತರಿಗೆ ಬಜಪೆ ಪೊಲೀಸರಿಂದ ರಾಜಾತಿಥ್ಯ, ದಿನಾಲೂ ನಿಸರ್ಗ ಹೋಟೆಲ್ನಿಂದ ಬೀಫ್ ಊಟವನ್ನು ನೀಡುತ್ತಿದ್ದಾರೆ. ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸ್ ಇಲಾಖೆ ಅಪರಾಧಿಗಳೊಟ್ಟಿಗೆ ಸೇರಿಕೊಂಡು ಪೂರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಇಲ್ಲಿ ಪೊಲೀಸ್ನವರ ಮೇಲೆ ಇಟ್ಟಿರುವ ಭರವಸೆ ಸುಳ್ಳಾಗುತ್ತಿದೆ. ಎಂಬುದಾಗಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಟ್ಟಿದ್ದ ಆಧಾರದಲ್ಲಿ ಕಳೆದ ಮೇ 8 ರಂದು ಮಂಗಳೂರು ನಗರದ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯ ವಿರುದ್ಧ ಈ ಹಿಂದೆ ಕೊಲೆ, ಕೊಲೆಯತ್ನ, ಹಲ್ಲೆ, ದರೋಡೆ ಸೇರಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ -3, ಕಾಪು ಪೊಲೀಸ್ ಠಾಣೆಯಲ್ಲಿ -1 ಪ್ರಕರಣಗಳು ಸಹ ದಾಖಲಾಗಿರುತ್ತದೆ. ಆರೋಪಿಯ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ.11/2021 ಕೊಲೆಯತ್ನ, ಅ.ಕ್ರ.137/2021 ಹಲ್ಲೆ, ಅ.ಕ್ರ.62/2022 ಕೊಲೆ ಪ್ರಕರಣ, ಹಾಗೂ ಕಾಪು ಪೊಲೀಸ್ ಠಾಣೆಯಲ್ಲಿ ಅ.ಕ್ರ.62/2024 ದರೋಡೆ ಪ್ರಕರಣ ದಾಖಲಾಗಿರುತ್ತದೆ.
























