ಸರಣಿ ಗೆಲುವಿಗೆ ಟೀಮ್ ಇಂಡಿಯಾ ಪ್ರಯತ್ನ ; ಸಮಬಲಗೊಳಿಸುವ ತವಕದಲ್ಲಿ ದಕ್ಷಿಣ ಆಫ್ರಿಕಾ
ಅಹಮದಾಬಾದ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಭಾರತ ಸರಣಿ ಗೆಲ್ಲುವ ತವಕದಲ್ಲಿದೆ. ದಕ್ಷಿಣ ಆಫ್ರಿಕಾ ಸರಣಿಯನ್ನು ಸಮಗೊಳಿಸಲು ಯತ್ನಿಸಲಿದೆ.
ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಲಖನೌ ಏಕಾನಾ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪ್ರಸ್ತುತ ಸರಣಿಯ 4ನೇ ಪಂದ್ಯವು ಭಾರಿ ಮಂಜಿನಿಂದಾಗಿ ರದ್ದಾಗಿತ್ತು. ಈ ಟಿ20 ಸರಣಿಯಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 2-1 ಮುನ್ನಡೆ ಸಾಧಿಸಿದೆ. ಇದೀಗ ಅಹಮದಾಬಾದ್ ಟಿ20ಯನ್ನು ಗೆದ್ದರೆ, ಸೂರ್ಯಕುಮಾರ್ ಪಡೆ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಳ್ಳಲಿದೆ. ಇತ್ತ ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 2-2 ಅಂತರದಲ್ಲಿ ಕೊನೆಗೊಳಿಸಲು ಯತ್ನಿಸಲಿದೆ.
ಟಾಸ್ ಗೆದ್ದವರು ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಬಹುದು. ಏಕೆಂದರೆ ಈ ಮೈದಾನದಲ್ಲಿ ಇದುವರೆಗೆ ನಡೆದಿರುವ 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಮೊದಲು ಬ್ಯಾಟ್ ಮಾಡಿದ ತಂಡ ಮತ್ತು ನಾಲ್ಕು ಪಂದ್ಯಗಳನ್ನು ಚೇಸ್ ಮಾಡಿದ ತಂಡಗಳು ಗೆದ್ದಿವೆ. ಇಲ್ಲಿ ಟಿ20 ಗಳಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 160 ರನ್‌ಗಳು ಎಂಬುದು ಗಮನಿಸಬೇಕಾದ ಸಂಗತಿ.
ಪಂದ್ಯಕ್ಕೆ ಮಳೆಯ ಆತಂಕವಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಅಹಮದಾಬಾದ್‌ನಲ್ಲಿ ಮಂಜು ಕವಿದಿರುವ ಸಾಧ್ಯತೆ ಇಲ್ಲ ಮತ್ತು ಆಕಾಶವು ಸಂಪೂರ್ಣವಾಗಿ ಸ್ಪಷ್ಟವಾಗಿರುತ್ತದೆ. ಪಂದ್ಯದ ಸಮಯದಲ್ಲಿ ತಾಪಮಾನವು 15 ರಿಂದ 30 ಡಿಗ್ರಿ ಸೆಲ್ಸಿಯಸ್ ನಡುವೆ ಇರುವ ನಿರೀಕ್ಷೆಯಿದೆ, ಇದರಿಂದಾಗಿ ಪೂರ್ಣ 40 ಓವರ್‌ಗಳನ್ನು ಯಾವುದೇ ಅಡೆತಡೆಯಿಲ್ಲದೆ ಆಡುವ ಸಾಧ್ಯತೆಯಿದೆ.
ಟೀಂ ಇಂಡಿಯಾದ ಉಪನಾಯಕ ಶುಭ್ಮನ್ ಗಿಲ್ 4ನೇ ಟಿ20 ಪಂದ್ಯಕ್ಕೂ ಮುನ್ನ ಅಭ್ಯಾಸದ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರನ್ನು ಟಿ20 ಸರಣಿಯನ್ನು ಹೊರಗಿಡಲಾಗಿದೆ ಎಂಬ ಮಾಹಿತಿ ಇತ್ತು. ಆದರೆ 4ನೇ ಪಂದ್ಯ ನಡೆಯದ ಕಾರಣ ಗಿಲ್ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಒಂದು ವೇಳೆ ಗಿಲ್ ಗಾಯಗೊಂಡಿರುವುದು ನಿಜವಾದರೆ ಅವರ ಬದಲಿಗೆ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗಬಹುದು.
ಸಂಭಾವ್ಯ ಪ್ಲೇಯಿಂಗ್ 11
ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಆರ್ಷದೀಪ್ ಸಿಂಗ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಐಡೆನ್ ಮಾರ್ಕ್ರಮ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆಯಿಸ್, ಡೇವಿಡ್ ಮಿಲ್ಲರ್, ಡೊನೊವನ್ ಫೆರೇರಾ, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಒಟ್ನಿಯಲ್ ಬಾರ್ಟ್‌ಮನ್, ಲುಂಗಿ ಎನ್‌ಗಿಡಿ, ಅನ್ರಿಚ್ ನೋಕಿಯಾ.
























