ಸೆಪ್ಟೆಂಬರ್ 9ರಿಂದ ಜೈಲಿನಲ್ಲಿದ್ದ ಚಿನ್ನಯ್ಯನನ್ನು ಬಿಡಿಸಿಕೊಂಡು ಹೋದ ಪತ್ನಿ
ಧರ್ಮಸ್ಥಳ: ಧರ್ಮಸ್ಥಳ ಷ್ಯಡ್ಯಂತ್ರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಇಂದು ಬೆಳಗ್ಗೆ ಶಿವಮೊಗ್ಗದ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾನೆ.
ಸೆಪ್ಟೆಂಬರ್ 9ರಂದು ಶಿವಮೊಗ್ಗ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ಬೆಳ್ತಂಗಡಿ ಜೆಎಂಎಫ್ಸಿ ಕೋರ್ಟ್ ಅದೇಶದ ಹಿನ್ನಲೆ ಶಿವಮೊಗ್ಗಕ್ಕೆ ಶಿಫ್ಟ್ ಆಗಿದ್ದ ಚಿನ್ನಯ್ಯ ಕಾರಾಗೃಹದ ಕಾವೇರಿ ಬ್ಯಾರಕ್ನಲ್ಲಿದ್ದ. ಚಿನ್ನಯ್ಯನಿಗೆ ಕಳೆದ ನವೆಂಬರ್ 24ರಂದು ಬೆಳ್ತಂಗಡಿ ನ್ಯಾಯಾಲಯ 12 ಷರತ್ತುಗಳನ್ನು ವಿಧಿಸಿ ಒಂದು ಲಕ್ಷ ರೂ. ಬಾಂಡ್ ಇಬ್ಬರು ಸ್ಥಳೀಯರ ಶೂರಿಟಿ ಪಡೆಯಬೇಕು ಎಂದು ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ಮಂಜೂರಾಗಿ 24 ದಿನ ಕಳೆದರೂ ಕೂಡ ಜಾಮೀನು ನೀಡಲು ಯಾರು ಮುಂದೆ ಬಾರದ ಕಾರಣ ಶಿವಮೊಗ್ಗ ಕಾರಾಗೃಹದಲ್ಲೇ ಚಿನ್ನಯ್ಯ ಇರಬೇಕಾಯಿತು. ಇಂದು ಚಿನ್ನಯ್ಯನನ್ನು ಬೆಳಗ್ಗೆ 8.30ರ ಸುಮಾರಿಗೆ ಬಿಡುಗಡೆ ಮಾಡಲಾಗಿದೆ.
ಬೆಳಗ್ಗೆ ಶಿವಮೊಗ್ಗದ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ಇನ್ನೋವಾ ಕಾರಿನಲ್ಲಿ ಚಿನ್ನಯ್ಯನ ಪತ್ನಿ ಮಲ್ಲಿಕಾ ಸೇರಿದಂತೆ ಐದು ಜನರು ಆಗಮಿಸಿ ಕಾರಾಗೃಹದೊಳಗೆ ಹೋದರು. ಕ್ಯಾಮೆರಾಗಳನ್ನು ನೋಡುತ್ತಿದ್ದಂತೆ ಚಿನ್ನಯ್ಯನ ಪತ್ನಿ ತಲೆಮೇಲೆ ಸೆರಗು ಮುಚ್ಚಿಕೊಂಡು ಜೈಲಿನೊಳಗೆ ಹೊರಟರು. ಜೈಲಿನಲ್ಲಿ ಬಿಡುಗಡೆ ಪ್ರಕ್ರಿಯೇಗಳನ್ನು ಮುಗಿಸಿ ಪತಿ ಚಿನ್ನಯ್ಯನನ್ನು ಕರೆದುಕೊಂಡು ಅವಸರದಿಂದಲೇ ಹೊರಟು ಹೋದರು.
ಶಿವಮೊಗ್ಗ ಕಾರಾಗೃಹದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಬಿಡುಗಡೆ ಪ್ರಕ್ರಿಯೆ ನಡೆಯಿತು. ಒಟ್ಟಿನಲ್ಲಿ ಜಾಮೀನು ಮಂಜೂರಾಗಿ 24 ದಿನಗಳ ಬಳಿಗೆ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ಚಿನ್ನಯ್ಯನಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕರೂ ಆತನನ್ನು ಬಿಡಿಸಿಕೊಂಡು ಹೋಗಲು ಯಾರೂ ಮುಂದೆ ಬಂದಿರಲಿಲ್ಲ. ಆರ್ಥಿಕ ಸಂಕಷ್ಟ ಹಾಗೂ ಶ್ಯೂರಿಟಿ ಇಲ್ಲದ ಕಾರಣ ಚಿನ್ನಯ್ಯ ಶಿವಮೊಗ್ಗ ಜೈಲಿನಲ್ಲಿಯೇ ಉಳಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಡಿ.17 ಚಿನ್ನಯ್ಯನ ಪತ್ನಿ ಮಲ್ಲಿಕಾ ಅವರು ಕೋರ್ಟ್ಗೆ ಹಾಜರಾಗಿ, ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರು ಜಾಮೀನುದಾರರ ಶ್ಯೂರಿಟಿಯನ್ನು ಒದಗಿಸಿದ್ದಾರೆ. ಇದನ್ನು ಪರಿಶೀಲಿಸಿದ ನ್ಯಾಯಾಧೀಶರು ಆರೋಪಿ ಬುರುಡೆ ಚಿನ್ನಯ್ಯನ ಬಿಡುಗಡೆಗೆ ಆದೇಶ ನೀಡಿದ್ದಾರೆ.
ನವೆಂಬರ್ 24ರಂದೇ, ಕಳೆದ ನಾಲ್ಕು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನಿಗೆ ಕೋರ್ಟ್ ಜಾಮೀನು ನೀಡಿತ್ತು. 1 ಲಕ್ಷ ರೂ. ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಸೇರಿದಂತೆ ಒಟ್ಟು 12 ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿತ್ತು. ಆದರೆ, ಆರ್ಥಿಕ ಸಮಸ್ಯೆಯಿಂದಾಗಿ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಬಂದಿತು.
ನೂರಾರು ಅನಾಥ ಶವಗಳನ್ನು ಹೂತು ಹಾಕಿದ್ದೇನೆ ಎಂಬ ಆರೋಪದಡಿ, ಆಗಸ್ಟ್ 23ರಂದು ಚಿನ್ನಯ್ಯನನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್ 6ರಂದು ನ್ಯಾಯಾಂಗ ಬಂಧನ ವಿಧಿಸಿ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿತ್ತು. ಚಿನ್ನಯ್ಯನನ್ನು ದಾಳವಾಗಿಸಿಕೊಂಡು ಬಳಸಿಕೊಂಡಿದ್ದ ಬುರುಡೆ ಗ್ಯಾಂಗ್ ಆತ ಬಂಧನವಾಗುತ್ತಿದ್ದಂತೆ ಅಂತರ ಕಾಯ್ದುಕೊಂಡಿತ್ತು. ಇದೀಗ ಸುಮಾರು 4 ತಿಂಗಳ ಜೈಲುವಾಸದ ಬಳಿಕ ಚಿನ್ನಯ್ಯ ಹೊರಬಂದಿದ್ದಾನೆ.
























