ಸಚಿವ ಕೃಷ್ಣ ಭೈರೇಗೌಡ ಮೇಲೆ ಭೂ ಕಬಳಿಕೆ ಆರೋಪ : ರಾತ್ರಿಯಿಡೀ ತಾಲೂಕು ಕಚೇರಿ ಮುಂದೆ ಕಾವಲು ನಿಂತ ಬಿಜೆಪಿ ಕಾರ್ಯಕರ್ತರು

ರಾತ್ರೋರಾತ್ರಿ ಕಡತಗಳನ್ನು ತಿದ್ದುವ ಅನುಮಾನದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಗೆ ಬಿಜೆಪಿ ಕಾವಲು

ಬೆಂಗಳೂರು: ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೋಲಾರ ತಾಲೂಕು ಕಚೇರಿಯಲ್ಲಿ ರಾತ್ರಿಯಿಡೀ ಬಿಜೆಪಿ ಕಾರ್ಯಕರ್ತರು ಕಾವಲು ಕುಳಿತ ಘಟನೆ ನಡೆದಿದೆ. ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತಾಲೂಕು ಕಚೇರಿಯ ಮುಂದೆ ಜಮಾಯಿಸಿ ದಾಖಲೆಗಳನ್ನು ರಕ್ಷಿಸುವ ಉದ್ದೇಶದಿಂದ ಇಡೀ ರಾತ್ರಿ ಕಾವಲು ಕಾದಿದ್ದಾರೆ. ತನಿಖೆ ನಡೆಯುವವರೆಗೆ ದಾಖಲೆಗಳನ್ನು ತಿದ್ದುವ ಅಥವಾ ಪ್ರಭಾವ ಬಳಸಿ ಕಡತಗಳನ್ನು ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು, ಎಲ್ಲ ಸರ್ಕಾರಿ ದಾಖಲೆಗಳನ್ನು ಸುರಕ್ಷಿತವಾಗಿ ಉಳಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಬಿಜೆಪಿ ಶಾಸಕ ಛಲವಾದಿ ನಾರಾಯಣಸ್ವಾಮಿ, ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಹುಟ್ಟೂರು ಗರುಡಪಾಳ್ಯದಲ್ಲಿ ಸರ್ಕಾರಿ ಖರಾಬು ಜಮೀನನ್ನು ಕಬಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಸರ್ವೆ ನಂಬರ್ 46 ಮತ್ತು 47ರಲ್ಲಿ ಒಟ್ಟು 21 ಎಕರೆ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲಾಗಿದೆ ಎಂಬುದು ಅವರ ಆರೋಪವಾಗಿದೆ. ಈ ಆರೋಪಗಳ ಹಿನ್ನೆಲೆ ಕೋಲಾರ ತಾಲೂಕು ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ಕಾವಲು ಮುಂದುವರಿದಿದೆ.





















































 
 

ಕೋಲಾರದ ನರಸಾಪುರ ಹೋಬಳಿಯ ಗರುಡನಪಾಳ್ಯ ಗ್ರಾಮದ ಸರ್ವೆ ನಂ. 47ರಲ್ಲಿ 1 ಎಕರೆ ಜಾಗ, ಸರ್ವೆ 46ರಲ್ಲಿ 20.16 ಎಕರೆ ಜಾಗವನ್ನು ಕಂದಾಯ ಸಚಿವರು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರಾದ ಚಲವಾದಿ ನಾರಾಯಣಸ್ವಾಮಿ ಹಾಗೂ ಎನ್ ರವಿಕುಮಾರ್ ಆರೋಪಿಸಿದ್ದಾರೆ.

ದಾಖಲೆ ಪ್ರಕಾರ ಇದು ಕೆರೆ ಜಮೀನಾಗಿದ್ದು, ಸ್ಮಶಾನಕ್ಕೆ ಬಿಡಲಾಗಿದೆ. ಮೂಲ ದಾಖಲೆಗಳ ಪ್ರಕಾರ ಸರ್ಕಾರಿ ಸ್ಮಶಾನ ಖರಾಬು ಅಂತ ಇದೆ. ಮ್ಯುಟೇಷನ್‌ನಲ್ಲಿಯೂ ಖರಾಬ್ ಅಂತಿದೆ. ಆದರೆ ಈ ಜಮೀನು ಕಂದಾಯ ಸಚಿವರ ಖಾತೆಗೆ ಹೇಗೆ ಬರುತ್ತದೆ ಅಂತ ಚಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ಕೆರೆ ಹಾಗೂ ಸ್ಮಶಾನ ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿಕೊಳ್ಳಲು ಆಗುವುದಿಲ್ಲ. ಅಲ್ಲಿ ಸಿಲ್ವರ್ ಟೀಕ್ ಬೆಳೆಯುತ್ತಾರಂತೆ. ಇದನ್ನು ತನಿಖೆಗೆ ಒಳಪಡಿಸಬೇಕು ಎಂದುಒತ್ತಾಯಿಸಿದ್ದಾರೆ.

ಬಿಜೆಪಿಗರ ಆರೋಪಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ, ಖರಾಬು, ಸ್ಮಶಾನ ಜಾಗ ಹೌದೋ? ಅಲ್ವೋ ಎಂಬುದು ತನಿಖೆ ಆಗಲಿ. ಬಿಜೆಪಿ ಬಳಿ ದಾಖಲೆ ಇದ್ದರೆ ಕೊಡಲಿ. ಜಿಲ್ಲಾಧಿಕಾರಿಗಳಿಗೆ, ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದು ಸವಾಲು ಹಾಕಿದ್ದಾರೆ. ನಮ್ಮ ತಾತ ಕ್ರಯಕ್ಕೆ ತೆಗೆದುಕೊಂಡ ಆಸ್ತಿ ನಮ್ಮ ತಂದೆ ಮೂಲಕ ನಮಗೆ ಬಂದಿದೆ. ಕುಟುಂಬದ ಆಸ್ತಿ ವಿಭಾಗ ಆಗಿ ನನ್ನ ಪಾಲಿಗೆ ಬಂದಿದೆ. 1978ರಲ್ಲಿ ನಾನು ಹುಟ್ಟಿ 5 ವರ್ಷ. ಅದು ನಮ್ಮ ತಾತನವರ ಜಮೀನು. ನಮ್ಮ ತಂದೆಯವರಿಗೆ ಮೂವರು ಗಂಡು ಮಕ್ಕಳಿದ್ದೇವೆ. ಎಲ್ಲರಿಗೂ ಆಸ್ತಿ ವಿಭಾಗವಾಗಿ ನನ್ನ ಪಾಲಾಗಿ ಆ ಜಮೀನು ಬಂದಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ನಾನೇ ಮಂತ್ರಿ ಆಗಿ ನಾನೇ ತನಿಖೆ ಮಾಡಿಸಿದರೆ ನಾನೇ ಸಚಿವನಾಗಿದ್ದೆ ಎನ್ನುತ್ತಾರೆ. ಲೋಕಾಯುಕ್ತದಂತಹ ಸ್ವತಂತ್ರ ತನಿಖಾ ಸಂಸ್ಥೆ ತನಿಖೆ ನಡೆಸಿ ಸರಿ ತಪ್ಪು ಹೇಳಲಿ. 2000 ಇಸವಿಗೂ ಮೊದಲು ಕೈ ಬರಹ ಇದ್ದಿದ್ದು. ನಾನು ಆ ವೇಳೆ ವಿದೇಶದಲ್ಲಿ ಇದ್ದೆ. ಎಲ್ಲಾ ದಾಖಲೆಗಳನ್ನ ತೆಗೆದು ನೋಡಲಿ. ಕೆಲವರಿಗೆ ಕೆಸರೆರಚಾಟ ಮಾಡುವುದು ವೃತ್ತಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.

error: Content is protected !!
Scroll to Top