ಒಂಟಿ ವೃದ್ಧೆಯನ್ನು ಬೆದರಿಸಿ ಚಿನ್ನ-ನಗದು ದೋಚಿದ್ದ ದುಷ್ಕರ್ಮಿಗಳು
ಮಂಗಳೂರು: ಕುಡಿಯಲು ನೀರು ಕೇಳುವ ನೆಪದಲ್ಲಿ ವೃದ್ಧೆಯೊಬ್ಬರೇ ಇದ್ದ ಮನೆಗೆ ನುಗ್ಗಿ ಚಿನ್ನ ಹಾಗೂ ನಗದು ದೋಚಿದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದು, 4.43 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಸುರತ್ಕಲ್ ಮುಕ್ಕದ ಸಸಿಹಿತ್ಲು ರಸ್ತೆಯ ಮಿತ್ರಪಟ್ಟಣದ ಜಯಲಕ್ಷ್ಮೀ ನಿವಾಸದಲ್ಲಿ ವಾಸವಾಗಿರುವ ದಿ.ಜಿನ್ನಪ್ಪ ಸುವರ್ಣ ಅವರ ಪತ್ನಿ ಜಲಜ (85) ನೀಡಿದ ದೂರಿನ ಪ್ರಕಾರ, ಡಿಸೆಂಬರ್ 3ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಅಪರಿಚಿತರು ಮನೆ ಬಾಗಿಲು ತಟ್ಟಿ ಕುಡಿಯಲು ನೀರು ಕೇಳಿದ್ದಾರೆ. ಬಾಗಿಲು ತೆರೆಯದೇ ಇದ್ದುದರಿಂದ ಆರೋಪಿತರು ಮನೆಯ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ, ತುಳುವಿನಲ್ಲಿ ಚಿನ್ನ ಎಲ್ಲಿದೆ ಎಂದು ಬೆದರಿಸಿ, ಟವೆಲ್ನಿಂದ ಕುತ್ತಿಗೆಗೆ ಬಿಗಿದು ಜೀವ ಬೆದರಿಕೆ ಹಾಕಿದ್ದಾರೆ.
ಗೋದ್ರೇಜ್ನಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆ ಹಾಗೂ ಪರ್ಸ್ನಲ್ಲಿದ್ದ ಸುಮಾರು 14,000 ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್ಐ ರಘು ನಾಯಕ್, ರಾಘವೇಂದ್ರ ನಾಯಕ್ ಮತ್ತು ಸಿಬ್ಬಂದಿಯ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸುರತ್ಕಲ್ ನಿವಾಸಿ ಶೈನ್ ಎಚ್. ಪುತ್ರನ್ ಅಲಿಯಾಸ್ ಶಯನ್ ಅಲಿಯಾಸ್ ಶೈನ್ (21) ವಶಕ್ಕೆ ಪಡೆದುಕೊಂಡಿದೆ. ವಿಚಾರಣೆಯಲ್ಲಿ ಆತ ಜೈಸನ್ ಅಲಿಯಾಸ್ ಲೆನ್ಸನ್ ಕಾರ್ಕಳ ಜೊತೆಗೆ ಕೃತ್ಯ ನಡೆಸಿರುವುದಾಗಿ ಹಾಗೂ ಕಳವು ಮಾಡಿದ ಚಿನ್ನವನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಮಾಹಿತಿ ಆಧರಿಸಿ ಪೊಲೀಸರು ಬೆಂಗಳೂರಿಗೆ ತೆರಳಿ ವಿನೋದ್ ಅಲಿಯಾಸ್ ಕೋತಿ ಅಲಿಯಾಸ್ ವಿನೋದ್ ಕುಮಾರ್ (33) ಮತ್ತು ಗಿರೀಶ್ ಅಲಿಯಾಸ್ ಸೈಕಲ್ ಗಿರಿ (28) ಎಂಬವರನ್ನು ಡಿಸೆಂಬರ್ 14ರಂದು ಬಂಧಿಸಿದ್ದಾರೆ. ಆರೋಪಿಗಳಿಂದ 4.43 ಲಕ್ಷ ರೂ.ಮೌಲ್ಯದ ಕಳವುಗೈದ ಚಿನ್ನಾಭರಣಗಳು, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಮೂರು ಮೊಬೈಲ್ಫೋನ್ಗಳು ಹಾಗೂ 3,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೊಬ್ಬ ಆರೋಪಿ ಜೈಸನ್ ಅಲಿಯಾಸ್ ಲೆನ್ಸನ್ ಕಾರ್ಕಳ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಡಿಸೆಂಬರ್ 15ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
























