ಸೈಟ್, ಫ್ಲಾಟ್ ಮಾರಿ, ಸಾಲ ತೆಗೆದು ವಂಚಕರಿಗೆ ಹಣ ಪಾವತಿಸಿ ಮೋಸ ಹೋದ ಸಾಫ್ಟ್‌ವೇರ್ ಉದ್ಯೋಗಿ
ಬೆಂಗಳೂರು : ಮಹಿಳಾ ಟೆಕ್ಕಿಯೊಬ್ಬರನ್ನು ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಮಾಡಿ 2 ಕೋ. ರೂ. ಲೂಟಿ ಮಾಡಿದ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸೈಬರ್ ಚೋರರ ಬೆದರಿಕೆಗೆ ಮಣಿದ ಮಹಿಳೆ ತನ್ನ ಫ್ಲಾಟ್, ಸೈಟ್‌ಗಳನ್ನು ಮಾರಾಟ ಮಾಡಿ, ಸಾಲ ತೆಗೆದು ಹಣ ಹೊಂದಿಸಿ ಕೊಟ್ಟಿದ್ದಾರೆ.
ವಿಜ್ಞಾನ ನಗರದ ನ್ಯೂ ತಿಪ್ಪಸಂದ್ರ ನಿವಾಸಿ, ಸಾಫ್ಟ್‌ವೇರ್ ಉದ್ಯೋಗಿ ಭಾರಿ ವಂಚನೆಗೆ ಒಳಗಾದ ಮಹಿಳೆ. 10 ವರ್ಷದ ಮಗನೊಂದಿಗೆ ವಾಸವಾಗಿದ್ದ ಮಹಿಳೆಗೆ ಕೆಲ ತಿಂಗಳ ಹಿಂದೆ ಬ್ಲೂ ಡಾರ್ಟ್ ಕೋರಿಯರ್ ಹೆಸರಿನಲ್ಲಿ ಕರೆ ಬಂದಿತ್ತು. ಕರೆ ಮಾಡಿದವರು ತಾವು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡು, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಬ್ಯಾಗೇಜ್ ಪತ್ತೆಯಾಗಿದೆ ಎಂದು ಬೆದರಿಕೆ ಹಾಕಿದ್ದರು.
ಬಳಿಕ ವಿಡಿಯೋ ಕಾಲ್ ಮೂಲಕ ನಾವು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದು ಹೆದರಿಸಿ, ವೆರಿಫಿಕೇಶನ್ ನಡೆಯುವವರೆಗೂ ಎಲ್ಲೂ ಹೋಗಬಾರದು. ನಾವು ಹೇಳುವ ಆ್ಯಪ್ ಇನ್‌ಸ್ಟಾಲ್ ಮಾಡಬೇಕು ಹಾಗೂ ಹೇಳಿದಷ್ಟು ಹಣವನ್ನು ನಮ್ಮ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದ್ದರು. ವಿಚಾರಣೆಗೆ ಸರಿಯಾಗಿ ಸಹಕರಿಸಿ ಹೇಳಿದಂತೆ ಮಾಡದಿದ್ದರೆ ನಿಮ್ಮ ಮಗನ ಭವಿಷ್ಯಕ್ಕೆ ತೊಂದರೆ ಆಗುತ್ತದೆ ಎಂದು ನಕಲಿ ಪೊಲೀಸರು ಬೆದರಿಕೆ ಹಾಕಿದ್ದರು. ಈ ಮಾತುಗಳಿಗೆ ಹೆದರಿದ ಮಹಿಳೆ ಸೈಬರ್ ಖದೀಮರ ಸೂಚನೆಗಳನ್ನು ಅನುಸರಿಸಿದ್ದಾರೆ. ಹಣ ವರ್ಗಾವಣೆಗಾಗಿ ಮಾಲೂರಿನಲ್ಲಿ ಇದ್ದ ತಮ್ಮ ಎರಡು ಸೈಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದು, ವಿಜ್ಞಾನ ನಗರದಲ್ಲಿದ್ದ ಫ್ಲಾಟ್ ಅನ್ನೂ ಮಾರಾಟ ಮಾಡಿದ್ದಾರೆ. ಜೊತೆಗೆ ಐಸಿಐಸಿಐ ಬ್ಯಾಂಕ್‌ನಲ್ಲಿ ಲೋನ್ ಪಡೆದು, ಹಂತ ಹಂತವಾಗಿ ವಂಚಕರ ಖಾತೆಗೆ ಹಣ ಜಮಾ ಮಾಡಿದ್ದಾರೆ.
ಈ ರೀತಿ ಒಟ್ಟು ಸುಮಾರು 2 ಕೋಟಿ ರೂಪಾಯಿ ಹಣ ಕಳೆದುಕೊಂಡ ಬಳಿಕ ಮೋಸ ಹೋಗಿರುವ ಅನುಮಾನ ಬಂದಿದೆ. ತಕ್ಷಣವೇ ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
























