ಹಾಸನ: ವಿದ್ಯುತ್ ತಂತಿ ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಬಿಹಾರ ಮೂಲದ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕಾಟೀಹಳ್ಳಿಯ ಟೀಚರ್ಸ್ ಕಾಲನಿಯಲ್ಲಿ ನಡೆದಿದೆ.
ಬರಿಕುಲ್ (18) ಎಂಬವರೇ ಮೃತ ದುರ್ದೈವಿ. ಗಾಯಾಳುವನ್ನು ಸಲೀಂ(17) ಎಂದು ಗುರುತಿಸಲಾಗಿದೆ.
ತಾಂತ್ರಿಕ ದೋಷದ ಕಾರಣ ಈ ಇಬ್ಬರು ಕಂಬ ಏರಿ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೇ ಸಮಯದಲ್ಲಿ ತಂತಿಗಳಲ್ಲಿ ವಿದ್ಯುತ್ ಪ್ರವಹಿಸಿದ್ದು ಇಬ್ಬರಿಗೂ ತೀವ್ರ ಪ್ರಮಾಣದಲ್ಲಿ ಶಾಕ್ ಹೊಡೆದಿದೆ. ಬರೀಕುಲ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಸಲೀಂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ತಿಳಿದು ಬಂದಿದೆ.
ಸ್ಥಳದಲ್ಲಿದ್ದ ಮತ್ತೆ ಮೂವರು ಕಾರ್ಮಿಕರು ಭಯದಿಂದ ಓಡಿ ಹೋಗಿದ್ದಾರೆ. ಗಾಯಾಳುವನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಡಾವಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
























