ಸಂವಾದ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಬೆದರಿಕೆ ದಾಟಿಯಲ್ಲಿ ಮಾತನಾಡಿದ ಡಿಸಿಎಂ
ಬೆಂಗಳೂರು : ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಟನೆಯ ಪದಾಧಿಕಾರಿಗಳ ಜೊತೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆದುಕೊಂಡ ರೀತಿಗೆ ಭಾರಿ ಆಕ್ರೋಶ ಮತ್ತು ಟೀಕೆ ವ್ಯಕ್ತವಾಗಿದೆ. ದೂರು ನೀಡಲು ಬಂದವರ ಜೊತೆಗೆ ದರ್ಪದಿಂದ ಮಾತನಾಡಿದ್ದಲ್ಲದೆ ಬೆದರಿಕೆಯನ್ನೂ ಹಾಕಿರುವ ಶಿವಕುಮಾರ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಇದು ಅಹಂಕಾರದ ಪರಮಾವಧಿ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಪಕ್ಷ ಬಿಜೆಪಿ ಕೂಡ ಡಿಕೆಶಿ ವರ್ತನೆಯನ್ನು ಟೀಕಿಸಿದೆ.
ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ವಿಧೇಯಕ 2025 ಮಂಡನೆ ಆಗಲೇಬೇಕು ಅಂತ ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳು ಹಲವು ವರ್ಷಗಳಿಂದ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಬೇಡಿಕೆಗಳನ್ನು ಆಲಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಸಂವಾದ ನಡೆಸಿದರು. ಎಲ್ಲ ಸಲಹೆಗಳನ್ನು ಅವಲೋಕಿಸಿ ವಿಧೇಯಕ ಮಂಡಿಸುವುದಾಗಿ ಭರವಸೆ ನೀಡಿದ್ದಾರೆ. ಈ ವೇಳೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ವೇದಿಕೆ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದ ಡಿಕೆಶಿ ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ ಪದಾಧಿಕಾರಿ ಕಿರಣ್ ಹೆಬ್ಬಾರ್ ಎಂಬುವವರು ಬರೆದಿದ್ದ ಪತ್ರದ ಬಗ್ಗೆ ಮಾತನಾಡಿ ಪ್ರಧಾನಿಗೆ ಹೆದರಿಲ್ಲ ನಾನು. ಬ್ಲಾಕ್‌ಮೇಲ್ ತಂತ್ರಕ್ಕೆ ಹೆದರಲ್ಲ, ಹುಷಾರ್ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.
ವೇದಿಕೆ ಮೇಲೆ ಡಿಕೆ ಶಿವಕುಮಾರ್ ಗರಂ ಆದ ಬಗ್ಗೆ ಪ್ರತಿಕ್ರಿಯೆ ನೀಡಿದ ಕಿರಣ್ ಹೆಬ್ಬಾರ್, ನಾನು ಧಮ್ಕಿ ಹಾಕುವ ಪ್ರಯತ್ನ ಮಾಡಿಲ್ಲ ಅಂತ ಹೇಳಿದ್ದಾರೆ. ಡಿಕೆ ಶಿವಕುಮಾರ್ ಆಡಿರುವ ಮಾತಿಗೆ ಉದ್ಯಮಿ ಮೋಹನ್ ದಾಸ್ ಪೈ ಸೇರಿದಂತೆ ವಿಪಕ್ಷ ನಾಯಕರು ವಾಗ್ದಾಳಿ ಮಾಡಿದ್ದಾರೆ.
ಡಿ.ಕೆ ಶಿವಕುಮಾರ್ ಭಾಷಣದ ರೀತಿಗೆ ಉದ್ಯಮಿ ಮೋಹನ್ ದಾಸ್ ಪೈ ಅಸಮಾಧಾನ ಹೊರಹಾಕಿದ್ದಾರೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಸಚಿವರನ್ನು ಪ್ರಶ್ನಿಸುವ ಹಕ್ಕಿದೆ. ಈ ರೀತಿ ಮಾತನಾಡುವುದು, ಭಯ ಹುಟ್ಟಿಸುವುದು ತುಂಬಾ ತಪ್ಪು ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಡಿಕೆಶಿ ಅವರ ಪ್ರವೃತ್ತಿ ಗೊತ್ತಿದೆ ಅಂತಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಕಿಡಿಕಾರಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಉಪಮುಖ್ಯಮಂತ್ರಿಯೊಬ್ಬರು ಯಾವ ರೀತಿಯ ಭಾಷೆ ಬಳಸುತ್ತಿದ್ದಾರೆ, ಇದು ಉತ್ತರನಾ ಇಲ್ಲಾ ಬೆದರಿಕೆನಾ? ಎಂದು ವಿಪಕ್ಷ ನಾಯಕ ಆರ್ಅಶೋಕ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಅಪಾರ್ಟ್ಮೆಂಟ್ ಫೆಡರೇಷನ್ ಅವರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಡಿ.ಕೆ ಶಿವಕುಮಾರ್ ಬೆದರಿಕೆ ಹಾಕುತ್ತಿದ್ದಾರೆ. ಬೆಂಗಳೂರಿನ ಜನರು ವಿದ್ಯಾವಂತರು, ಧೈರ್ಯವಂತರು ಅವರು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದಿದ್ದಾರೆ.
ಎಚ್ಚರಿಕೆ ನೀಡುವುದಕ್ಕೆ ಅಪಾರ್ಟ್‌ಮೆಂಟ್ ನಿವಾಸಿಗಳು ವೋಟ್ ಬ್ಯಾಂಕ್ ಅಲ್ಲ. ಅಧಿಕಾರ ಒಂದು ಜವಾಬ್ದಾರಿ ಹೊರತು ಆಯುಧವಲ್ಲ. ಪ್ರಜಾಪ್ರಭುತ್ವ ದುರಹಂಕಾರಕ್ಕೆ ಮಣಿಯುವುದಿಲ್ಲ ಇದನ್ನು ನೆನಪಿಟ್ಟುಕೊಳ್ಳಿ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ವಾಗ್ದಾಳಿ ಮಾಡಿದ್ದಾರೆ.
























