10 ಕಿ.ಮೀ. ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿದರೂ ತಪ್ಪಿಸಿಕೊಂಡ ದುಷ್ಕರ್ಮಿಗಳು
ಚಿಕ್ಕಮಗಳೂರು: ರಸ್ತೆ ಬದಿ ಮಲಗಿದ್ದ ಗೋವುಗಳನ್ನು ಎಕ್ಸ್‌ಯುವಿ 500 ಕಾರಿನಲ್ಲಿ ತುಂಬಿಕೊಂಡು ಎಸ್ಕೇಪ್ ಆಗುತ್ತಿದ್ದ ಗೋ ಕಳ್ಳರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿರುವ ಘಟನೆ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಪ್ಪದಿಂದ ಕುದುರೆಗುಂಡಿಯವರೆಗೆ ಸುಮಾರು 10 ಕಿ.ಮೀ ಎರಡು ಕಾರುಗಳು ರೇಸ್‌ನಂತೆ ಅತಿವೇಗವಾಗಿ ಸಾಗಿವೆ. ಹಿಂದೂ ಸಂಘಟಕರು ಈ ಚೇಸ್ ಮಾಡಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಕೊಪ್ಪ ಪಟ್ಟಣದಿಂದ 10 ಕಿ.ಮೀ ದೂರದ ಕುದುರೆಗುಂಡಿವರೆಗೂ ಚೇಸ್ ಮಾಡಿದರೂ ಕಾರು ಅತಿವೇಗವಾಗಿ ಹೋಗುತ್ತಿದ್ದುದರಿಂದ ಹಿಡಿಯಲು ಸಾಧ್ಯವಾಗದೆ ಹಿಂದೂ ಸಂಘಟಕರು ವಾಪಸ್ ಬಂದಿದ್ದಾರೆ. ಈ ಕಾರು ತೀರ್ಥಹಳ್ಳಿ ಮಾರ್ಗವಾಗಿ ಹೋಗಿರಬಹುದು ಎಂದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಶಂಕೆ ವ್ಯಕ್ತಪಡಿಸಿವೆ.
ಕೊಪ್ಪ ಪಟ್ಟಣದಲ್ಲಿ ಮೇಲಿಂದ ಮೇಲೆ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಿಂದೂ ಸಂಘಟಕರು ಆರೋಪಿಸಿದ್ದಾರೆ. ಪೊಲೀಸರ ವಿರುದ್ಧ ಕಿಡಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ, ಮುಂದೆ ಇಂತಹ ಘಟನೆ ನಡೆಯದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಠಾಣೆ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
























