ಒಂದು ತಿಂಗಳೊಳಗೆ ಕನ್ನಡ ನಾಮಫಲಕ ಅಳಡಿಕೆ ಕಡ್ಡಾಯ : ಸಚಿವ ತಂಗಡಗಿ

ನಿಯಮ ಉಲ್ಲಂಘಿಸಿದರೆ 20 ಸಾವಿರ ರೂ. ದಂಡ

ಬೆಳಗಾವಿ: ಕರ್ನಾಟಕಾದ್ಯಂತ ಎಲ್ಲ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಟ್ರಸ್ಟ್ ನಡೆಸುವ ಸಂಸ್ಥೆಗಳು, ಆಸ್ಪತ್ರೆಗಳು, ಮನರಂಜನಾ ಕೇಂದ್ರಗಳು, ಹೋಟೆಲ್‌ ಗಳು ಸೇರಿದಂತೆ ಸಲ್ಲ ಸಂಸ್ಥಾಪನೆಗಳಲ್ಲಿ ಒಂದು ತಿಂಗಳೊಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಕಡ್ಡಾಯ ಕನ್ನಡ ಭಾಷಾ ನಾಮಫಲಕ ಅಳವಡಿಕೆ ಕುರಿತು ನಿಗಾವಹಿಸಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಆದಷ್ಟೂ ಬೇಗ ರಾಜ್ಯದಲ್ಲಿ ನಿಯಮ ಸಂಪೂರ್ಣ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ವಿಧಾನ ಪರಿಷತ್‌ನಲ್ಲಿ ಸದಸ್ಯೆ ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸುವ ಸಂಬಂಧ ನಿಯಮಗಳನ್ನು ಈಗಾಗಲೇ ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಗೆ ಅಂತಿಮ ಅನುಮೋದನೆಗಾಗಿ ಕಳುಹಿಸಲಾಗಿದೆ. ಮುಂದಿನ ಕೆಲವು ವಾರಗಳಲ್ಲಿ ಕಾರ್ಯವಿಧಾನ ಪೂರ್ಣಗೊಂಡ ನಂತರ, ರಾಜ್ಯಾದ್ಯಂತ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.





















































 
 

ಕನ್ನಡ ನಾಮಫಲಕ ಅಭಿಯಾನವು ಅನೇಕ ಜಿಲ್ಲೆಗಳಲ್ಲಿ ಯಶಸ್ವಿಯಾಗಿದೆ. ಹನ್ನೊಂದು ಜಿಲ್ಲೆಗಳಲ್ಲಿ ಶೇ.100 ಅನುಷ್ಠಾನ ಸಾಧಿಸಿದ್ದರೆ, ಉಳಿದವು ಶೇ.80 ಮತ್ತು 90ರಷ್ಟು ಅನುಷ್ಠಾನಗೊಂಡಿದೆ. ಎಲ್ಲ ಜಿಲ್ಲೆಗಳಲ್ಲಿ ಸಂಪೂರ್ಣ ಅಳವಡಿಕೆ ಗುರಿಯನ್ನು ಸರ್ಕಾರ ಹೊಂದಿದೆ. ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಮಟ್ಟದ ಸಮಿತಿಯನ್ನು ರಚಿಸಲಾಗಿದೆ, ಇದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿಗಳು ಸಹ ಜಾರಿಯಲ್ಲಿವೆ ಎಂದು ತಿಳಿಸಿದ್ದಾರೆ.

ನಾಮಫಲಕ ಹಾಕದಿದ್ದರೆ ಮೊದಲ ಅಪರಾಧಕ್ಕೆ 5,000 ರೂ., ಎರಡನೇ ಅಪರಾಧಕ್ಕೆ 10,000 ರೂ. ಮತ್ತು ನಂತರದ ಪ್ರತಿ ಉಲ್ಲಂಘನೆಗೆ 20,000 ರೂ. ದಂಡ ವಿಧಿಸಲಾಗುತ್ತದೆ. ಎಲ್ಲಾ ನಾಮ ಫಲಕಗಳಲ್ಲಿ 60:40 ಕನ್ನಡ ಬೋರ್ಡ್ ಪ್ರದರ್ಶಿಸಬೇಕು, ಹೆಚ್ಚಿನ ಭಾಗ ಕನ್ನಡವನ್ನು ಇರಬೇಕು. ರಾಜ್ಯದಲ್ಲಿ ಕನ್ನಡದ ಕಡ್ಡಾಯ ಬಳಕೆಯನ್ನು ಜಾರಿಗೊಳಿಸುವಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಂಗಡಗಿ ಸ್ಪಷ್ಟಪಡಿಸಿದ್ದಾರೆ.

error: Content is protected !!
Scroll to Top