ಕೊಲೆ ಪ್ರಕರಣದ ಅಪರಾಧಿಗೆ ಗಲ್ಲು ಶಿಕ್ಷೆ

ಒಂದೇ ಕುಟುಂಬದ ನಾಲ್ವರನ್ನು ಸಾಯಿಸಿದ್ದ ಪಾತಕಿ

ಮಡಿಕೇರಿ: ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿದ್ದ ಅಪರಾಧಿಗೆ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ. ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಗಲ್ಲು ಶಿಕ್ಷೆ ವಿಧಿಸಿದ ಮೊದಲ ತೀರ್ಪು ಇದು ಎನ್ನಲಾಗಿದೆ. ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿದ್ದ ಅಪರಾಧಿಗೆ ವಿರಾಜಪೇಟೆ ಸೆಷನ್ಸ್‌ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ಕೇರಳ ಮೂಲದ ಗಿರೀಶ್ ಎಂಬಾತನಿಗೆ ಈ ಮರಣದಂಡನೆ ವಿಧಿಸಿದೆ.

2024ರಲ್ಲಿ ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಕೊಳತೋಡು ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೇರಳ ಮೂಲದ ಗಿರೀಶ್ (37) ಬರ್ಬರವಾಗಿ ಹತ್ಯೆ ಮಾಡಿದ್ದ. ನಾಗಿ (35), ಆಕೆಯ ಮಗಳು ಕಾವೇರಿ (7) ಹಾಗೂ ನಾಗಿಯ ಅಜ್ಜ-ಅಜ್ಜಿ ಕರಿಯ (75) ಮತ್ತು ಗೌರಿ (70) ಹತ್ಯೆಯಾದವರು. ಆರೋಪಿ ಗಿರೀಶ್ ಕತ್ತಿಯಿಂದ ನಾಲ್ವರನ್ನೂ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದ.





















































 
 

ಪ್ರಕರಣದ ಭೀಕರತೆ ಮನಗಂಡ ಪೊನ್ನಂಪೇಟೆ ಠಾಣೆ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಆರೋಪಿ ಗಿರೀಶ್‌ನನ್ನು ಬಂಧಿಸಿದ್ದರು. ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

ಈ ಪ್ರಮುಖ ಪ್ರಕರಣದಲ್ಲಿ ಹಿರಿಯ ವಕೀಲ ಯಾಸೀನ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಎಲ್ಲ ಸಾಕ್ಷ್ಯ ಮತ್ತು ವಾದ-ಪ್ರತಿವಾದ ಪರಿಶೀಲಿಸಿದ ಬಳಿಕ ವಿರಾಜಪೇಟೆ ಸೆಷನ್ಸ್ ನ್ಯಾಯಾಲಯ ಗಿರೀಶ್‌ನ ಅಪರಾಧವು ಗಂಭೀರ ಸ್ವರೂಪದ್ದು ಎಂದು ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

error: Content is protected !!
Scroll to Top