ಮಂಗಳೂರು : ಗೂಗಲ್ ಮ್ಯಾಪ್ ನಂಬಿ ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಇಳಿಜಾರಿನ ತಿರುವಿನಲ್ಲಿ ರಸ್ತೆ ಪಕ್ಕದ ದರೆಗೆ ಡಿಕ್ಕಿ ಹೊಡೆದು ಘಟನೆ ಮಂಗಳವಾರ ತಡರಾತ್ರಿ ಮೂಡುಬಿದಿರೆಯ ಪಾಲಡ್ಕ ಪಂಚಾಯಿತಿ ವ್ಯಾಪ್ತಿಯ ಕಡಂದಲೆಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಚಾಲಕ ಪಾರಾಗಿದ್ದಾನೆ.
ರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಚಾಲಕ ಗೂಗಲ್ ಮ್ಯಾಪ್ ಹಾಕಿಕೊಂಡು ಮೂಡುಬಿದಿರೆ ಕಡೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದ. ಆದರೆ ಗೂಗಲ್ ಮ್ಯಾಪ್ ಮುಖ್ಯರಸ್ತೆ ಬಿಟ್ಟು ಒಳರಸ್ತೆಯ ದಾರಿ ತೋರಿಸಿದ್ದು, ಅದನ್ನು ನಂಬಿ ಚಾಲಕ ಕಡಿದಾದ ರಸ್ತೆಯಲ್ಲಿ ಬಂದಿದ್ದ. ತಿರುವಿನಲ್ಲಿ ರಸ್ತೆ ಸರಿಯಾಗಿ ಗೋಚರಿಸದೆ ರಸ್ತೆಬದಿಯ ದರೆಗೆ ಡಿಕ್ಕಿ ಹೊಡೆದಿದ್ದಾನೆ.
ರಾತ್ರಿಯಾದ ಕಾರಣ ದಾರಿ ಕೇಳಲು ಯಾರೂ ಸಿಗಲಿಲ್ಲ, ಹೀಗಾಗಿ ಗೂಗಲ್ ಮ್ಯಾಪ್ ಹಾಕಿಕೊಂಡು ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿರುವ ಪೇಪರ್ ಮಿಲ್ ಒಂದಕ್ಕೆ ಚಾಲಕ ಹೋಗುತ್ತಿದ್ದ. ಗೂಗಲ್ ಮ್ಯಾಪ್ ಹತ್ತಿರದ ದಾರಿಯನ್ನು ತೋರಿಸುವುದರಿಂದ ಅನೇಕ ಸಲ ಚಾಲಕರು ಸಂಚಾರ ಯೋಗ್ಯವಲ್ಲದ ರಸ್ತೆಯಲ್ಲಿ ಹೋಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ.
























