ಪಾರ್ಟ್ ಟೈಮ್ ಜಾಬ್ ನೆಪದಲ್ಲಿ ವಂಚಿಸಿದ ಸೈಬರ್ ಚೋರರು
ಉಡುಪಿ: ಆನ್ಲೈನ್ ಟಾಸ್ಕ್ ನಂಬಿ ಮಹಿಳೆಯೊಬ್ಬರು ಲಕ್ಷಗಟ್ಟಲೆ ಹಣ ಕಳೆದುಕೊಂಡ ಘಟನೆ ಉಡುಪಿಯ ಉದ್ಯಾವರ ಸಮೀಪ ನಡೆದಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯಾವರದ ವಿಜಯಲಕ್ಷ್ಮೀ (55) ಎಂಬ ಮಹಿಳೆ ನ.29ರಂದು ಫೇಸ್ಬುಕ್ನಲ್ಲಿ ವರ್ಕ್ಫ್ರಮ್ ಹೋಮ್ ಕುರಿತ ಜಾಹೀರಾತು ಕ್ಲಿಕ್ ಮಾಡಿದ್ದು, ಆಗ ವಿಜಯಲಕ್ಷ್ಮೀ ಅವರ ವಾಟ್ಸಾಪ್ಗೆ ಸಂದೇಶ ಬಂದಿತ್ತು. ತಾನು ಕಂಪನಿಯೊಂದರ ಎಚ್ಆರ್ ಎಂಬುದಾಗಿ ಪರಿಚಯಿಸಿಕೊಂಡು ವ್ಯಕ್ತಿ, ಪಾರ್ಟ್ ಟೈಮ್ ಕೆಲಸ ಮಾಡಲು ಆಸಕ್ತಿ ಇದ್ದರೆ ಫಾರ್ಮ್ ಪಿಲ್ ಮಾಡಿ ಕಳುಹಿಸಿ ಎಂಬುದಾಗಿ ಸಂದೇಶ ಕಳುಹಿಸಿದ್ದನು.
ಅದರ ನಂತರ ಅವನು ವಿವಿಧ ಲಿಂಕ್ಗಳನ್ನು ಕಳುಹಿಸಿದ್ದು, ಅದರಲ್ಲಿ ವಿವಿಧ ಟಾಸ್ಕ್ಗಳನ್ನು ನೀಡಲಾಗಿತ್ತು. ಟಾಸ್ಕ್ ಮಾಡಿರುವುದಕ್ಕೆ ಹಣವನ್ನು ಕೂಡ ಹಾಕಲಾಗಿತ್ತು. ಡಿ.1ರಂದು ಇನ್ನೊಂದು ಕಳುಹಿಸಿದ್ದು, ಅದನ್ನು ಒತ್ತಿದಾಗ ಟೆಲಿಗ್ರಾಮ್ ಖಾತೆ ಓಪನ್ ಆಗಿತ್ತು. ಅದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ತಿಳಿಸಲಾಗಿತ್ತು. ಅದನ್ನು ನಂಬಿದ ವಿಜಯಲಕ್ಷ್ಮೀ, ವಂಚಕರು ತಿಳಿಸಿದಂತೆ ಡಿ.1ರಿಂದ ಡಿ.4ರವರೆಗೆ ಒಟ್ಟು 31,00,067ರೂ. ಹಣವನ್ನು ಪಾವತಿ ಮಾಡಿದ್ದರು. ಆದರೆ ಈವರೆಗೆ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಅದರ ಲಾಭಾಂಶವನ್ನಾಗಲಿ ನೀಡದೆ ವಂಚಿಸಲಾಗಿದೆ. ಮೋಸ ಹೋದದ್ದು ಅರಿವಾದ ಬಳಿಕ ಮಹಿಳೆ ದೂರು ನೀಡಿದ್ದಾರೆ.
























