ಮಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶವನ್ನು ನಂಬಿ ವಿದ್ಯಾರ್ಥಿಯೊಬ್ಬ ಬರೋಬ್ಬರಿ 31.99 ಲ.ರೂ. ಕಳೆದುಕೊಂಡಿರುವ ಕುರಿತು ದೂರು ದಾಖಾಲಾಗಿದೆ. ಹೋಮಿಯೋಪತಿ ಕಲಿಯುತ್ತಿರುವ ಯುವಕನಿಗೆ ಆನ್‌ಲೈನ್ ಮೂಲಕ 31.99 ಲಕ್ಷ ರೂ. ವಂಚಿಸಲಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶವನ್ನು ಗಮನಿಸಿದ ತಾನು ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಹುದು ಎಂಬ ಆಸೆಯಿಂದ ಆರೋಪಿಗಳು ನೀಡಿದ ಬೇರೆ ಬೇರೆ ಖಾತೆಗಳಿಗೆ ನ.5ರಿಂದ 26ರ ವರೆಗೆ ತನ್ನಲ್ಲಿದ್ದ ಹಣ ಹಾಗೂ ಮನೆಯಲ್ಲಿದ್ದ ಬಂಗಾರನ್ನು ಅಡವಿಟ್ಟು ಹಂತ ಹಂತವಾಗಿ 31,99,800 ರೂ. ವರ್ಗಾಯಿಸಿದ್ದೆ. ಬಳಿಕ ಹೂಡಿಕೆ ಮಾಡಿದ ಹಣವನ್ನು ವಾಪಸ್ ನೀಡುವಂತೆ ಕೇಳಿಕೊಂಡಾಗ ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಹೇಳಿದ್ದಲ್ಲದೆ ತೆರಿಗೆ ಮತ್ತಿತರ ಶುಲ್ಕಗಳನ್ನು ಪಾವತಿಸಬೇಕು. ಇಲ್ಲದಿದ್ದಲ್ಲಿ ಯಾವುದೇ ಹಣ ಹಿಂಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಬಳಿಕ ಮನೆಯವರು ಹಾಗೂ ಸ್ನೇಹಿತರಲ್ಲಿ ಈ ವಿಷಯ ಹೇಳಿದಾಗ ತಾನು ಮೋಸ ಹೋಗಿರುವುದು ಗಮನಕ್ಕೆ ಬಂತು ಎಂದು ಹಣ ಕಳಕೊಂಡ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾರೆ.
ಈತ ಬಿಡುವಿನ ಸಮಯದಲ್ಲಿ ಪೌರೋಹಿತ್ಯದಲ್ಲಿ ಸಹಾಯಕನಾಗಿ ಕೆಲಸ ಮಾಡಿ ಒಂದಷ್ಟು ಹಣ ಗಳಿಸುತ್ತಿದ್ದರು. ಈಗ ಎಲ್ಲ ಹಣ ವಂಚಕರ ಪಾಲಾಗಿದೆ.
























