ಮದುವೆ ಇಷ್ಟ ಇಲ್ಲ ಎಂದು ಹೇಳದೆ ಕೇಳದೆ ಚೆನ್ನೈಗೆ ಹೋದ ಯುವಕ
ಮಂಗಳೂರು: ಮದುವೆಗೆ ಎರಡು ದಿನಗಳು ಬಾಕಿಯಿರುವಂತೆಯೇ ಯುವಕನೊಬ್ಬ ಕಾರಿನ ಜತೆ ನಾಪತ್ತೆಯಾಗಿದ್ದು, ಆತ ಚೆನ್ನೈಗೆ ತೆರಳಿರುವ ಬಗ್ಗೆ ಮಾಹಿತಿ ಲಭಿಸಿದೆ. ಜಪ್ಪು ಮಾರ್ಕೆಟ್ ಅರಕೆರೆಬೈಲುವಿನ ನಿವಾಸಿ ರಕ್ಷಣ್ ಜೆ.ಕೆ. (32) ನಾಪತ್ತೆಯಾಗಿ ಚೆನ್ನೈಗೆ ತೆರಳಿದವರು.
ರಕ್ಷಣ್ ತನ್ನ ಮನೆಯಿಂದ ಡಿ.6ರಂದು ಬೆಳಗ್ಗೆ 11.30ಕ್ಕೆ ತನ್ನ ತಾಯಿಯ ಕಾರಿನಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರು ಹಾಗೂ ಗೆಳೆಯರಿಗೆ ನೀಡಲೆಂದು ಹೋಗಿದ್ದರು. ಆ ಬಳಿಕ ಮನೆಗೂ ಬಾರದೆ, ಸಂಬಂಧಿಕರ ಮನೆಗೂ ತೆರಳದೆ, ಮೊಬೈಲ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದರು. ಶನಿವಾರ ಮಧ್ಯಾಹ್ನ ತಾಯಿಗೆ ಕರೆ ಮಾಡಿ ಅರ್ಧಗಂಟೆಯಲ್ಲಿ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರೂ ಮರಳಿ ಬಂದಿಲ್ಲ, ಮೆಸೇಜ್ ಕೂಡ ನೋಡಿಲ್ಲ. ಭಾನುವಾರ ಸಂಜೆ ರಕ್ಷಣ್ ಜೆ.ಕೆ. ಅವರ ಮೆಹಂದಿ ಕಾರ್ಯಕ್ರಮವಿತ್ತು. ಅ.6ರಂದು ರಾತ್ರಿ 10.30ರ ವೇಳೆ ಯುವಕ ತೆರಳಿದ್ದ ಕಾರು ನಗರದ ಪುರಭವನ ಬಳಿ ಪತ್ತೆಯಾಗಿದೆ. ಕಾರು ಲಾಕ್ ಆದ ಸ್ಥಿತಿಯಲ್ಲಿತ್ತು.
ಯುವಕ ತನಗೆ ಮದುವೆ ಇಷ್ಟವಿಲ್ಲ ಎಂದು ಮನೆಯವರ ಬಳಿ ಹೇಳಿದ್ದ. ಆದರೂ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು. ಈ ಮಧ್ಯೆ ಯುವಕ ಮನೆಯಿಂದ ನಾಪತ್ತೆಯಾಗಿ ಶನಿವಾರ ಮಧ್ಯಾಹ್ನದ ರೈಲಿನಲ್ಲಿ ಚೆನ್ನೈಯತ್ತ ತೆರಳಿದ್ದಾನೆ. ಸೋಮವಾರ ಮೊಬೈಲ್ ಕರೆ ಸ್ವೀಕರಿಸಿದ್ದು, ತಾನು ಚೆನ್ನೈಯಲ್ಲಿದ್ದೇನೆ ಎಂದು ಹೇಳಿದ್ದಾನೆ. ಕೂಡಲೇ ಪೊಲೀಸರು ಲೊಕೇಷನ್ ಸರ್ಚ್ ಮಾಡಿದಾಗ ಆತ ಚೆನ್ನೈಯಲ್ಲಿರುವುದು ಸ್ಪಷ್ಟವಾಗಿದೆ. ಆತನನ್ನು ಮರಳಿ ಮಂಗಳೂರಿಗೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























