ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ

ಸರ್ಕಾರದ ಮೇಲೆ ದಾಳಿ ಮಾಡಲು ವಿಪಕ್ಷ ಸರ್ವಸನ್ನದ್ಧ

ಬೆಳಗಾವಿ: ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭಗೊಳ್ಳಲಿದೆ. ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಪ್ರತಿವರ್ಷ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತದೆ.

ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷದ ಕೈಯಲ್ಲಿ ಸಾಕಷ್ಟು ವಿಷಯಗಳು ಇದ್ದು, ಈ ಅಧಿವೇಶನವೂ ಕಾವೇರುವ ಎಲ್ಲ ಸಾಧ್ಯತೆ ಇದೆ. ಬೆಳೆಗಳಿಗೆ ಬೆಂಬಲ ಬೆಲೆ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಯಾಗಿದ್ದು, ಈ ಸಲ ಅಧಿವೇಶನಕ್ಕೂ ಮೊದಲೇ ಇದು ಬಹಳಷ್ಟು ಸುದ್ದಿ ಮಾಡಿರುವುದರಿಂದ ಅಧಿವೇಶನದಲ್ಲಿ ಈ ವಿಚಾರ ಕೋಲಾಹಲ ಎಬ್ಬಿಸುವ ನಿರೀಕ್ಷೆ ಇದೆ.





















































 
 

ಸರ್ಕಾರದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆಯುತ್ತಿರುವ ಕಚ್ಚಾಟದ ಹಿನ್ನೆಲೆಯಲ್ಲಿ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದರೂ ಇಷ್ಟರ ತನಕ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಹದಗೆಟ್ಟಿರುವ ಕಾನೂನು ವ್ಯವಸ್ಥೆ, ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಮುಂತಾದ ಅನೇಕ ವಿಚಾರಗಳು ವಿಪಕ್ಷದ ಬತ್ತಳಿಕೆಯಲ್ಲಿದೆ.

ಈ ಅಧಿವೇಶನದಲ್ಲಿ ಸರ್ಕಾರ ದ್ವೇಷ ಭಾಷಣ ವಿರುದ್ಧ ಮಸೂದೆ ಮಂಡಿಸಲಿದ್ದು, ಇದು ಕೋಲಾಹಲ ಸೃಷ್ಟಿಸುವ ನಿರೀಕ್ಷೆಯಿದೆ. ಸರ್ಕಾರವೂ ಪ್ರತಿಪಕ್ಷದ ದಾಳಿಯನ್ನು ಎದುರಿಸಲು ತನ್ನದೇ ರೀತಿಯಲ್ಲಿ ತಯಾರಿ ಮಾಡಿಕೊಂಡಿದೆ.

ಬೆಳಗಾವಿಯಲ್ಲಿ ಈವರೆಗೆ 13 ಬಾರಿ ಉಭಯ ಸದನಗಳ ಅಧಿವೇಶನ ನಡೆದಿದ್ದು, ಒಟ್ಟು 170 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಕಳೆದ ವರ್ಷ 15 ಕೋಟಿ ರೂ. ವೆಚ್ಚದಲ್ಲಿ ಅಧಿವೇಶನ ಮುಕ್ತಾಯಗೊಂಡಿತ್ತು. ಈ ಸಲದ 10 ದಿನದ ಬೆಳಗಾವಿ ಅಧಿವೇಶನಕ್ಕೆ 21 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಬೆಳಗಾವಿ ಅಧಿವೇಶನದಿಂದ ಜನರಿಗೆ ದೊಡ್ಡ ಮಟ್ಟದಲ್ಲಿ ಏನೂ ಪ್ರಯೋಜನ ಆಗುವುದಿಲ್ಲ ಎಂಬ ಅಭಿಪ್ರಾಯ ಇದೆ. ಆಡಳಿತ ವಿಪಕ್ಷಗಳು ಗಂಭೀರ ಸ್ವರೂಪದ ಚರ್ಚೆ ನಡೆಸುವ ಬದಲಾಗಿ ಕಾಲಹರಣದಲ್ಲಿ ತೊಡಗಿಸಿಕೊಳ್ಳುತ್ತಿವೆ ಎಂಬ ಆರೋಪಗಳೂ ಇವೆ.

ಶಾಸಕರು, ಅಧಿಕಾರಿಗಳ ವಸತಿಗಾಗಿ 3 ಸಾವಿರ ಕೋಠಡಿಗಳು ಬುಕ್ಕಿಂಗ್ ಆಗಿದ್ದು 6 ಸಾವಿರ ಪೊಲೀಸ್ ಸಿಬ್ಬಂದಿ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಸುವರ್ಣ ಸೌಧದ ಸುತ್ತಮುತ್ತ ವ್ಯಾಪಕ ಪೊಲೀಸ್ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ.

ಇಷ್ಟೆಲ್ಲಾ ಖರ್ಚು ವೆಚ್ಚ ಮಾಡಿದ್ರೂ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂಬುದು ಪ್ರತಿವರ್ಷ ಕೇಳಿ ಬರುತ್ತಿರುವ ಆರೋಪವಾಗಿದೆ. ನೆಪಮಾತ್ರಕ್ಕೆ ಕೊನೆಯ 2 ದಿನಗಳ ಕಾಲ ಉತ್ತರ ಕರ್ನಾಟಕದ ಭಾಗದ ಚರ್ಚೆಗೆ ಸಮಯ ನೀಡಲಾಗುತ್ತದೆ. ಉಳಿದಂತೆ ಹೆಚ್ಚಿನ ಅವಧಿಯಲ್ಲಿ ಇತರ ಚರ್ಚೆಗಳು, ಗಲಾಟೆ, ಗದ್ದಲವೆ ಗಮನ ಸೆಳೆಯುತ್ತದೆ.

ಹೀಗಾಗಿ ಈ ಬಾರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಒಟ್ಟು 84 ಸಂಘಟನೆಗಳು ಸಿದ್ಧತೆ ನಡೆಸಿಕೊಂಡಿವೆ. ಹೆಸರುಕಾಳು, ಸೋಯಾಬಿನ್, ಬೆಳೆಗಳಿಗೆ ಪರಿಹಾರ ನೀಡುವಂತೆ ಬಿಜೆಪಿ ಸುವರ್ಣ ಸೌಧ ಮುತ್ತಿಗೆಗೆ ನಿರ್ಧಾರ ಮಾಡಿದೆ. ಕಬ್ಬು ಬೆಳೆಗಾರರ ವಿವಿಧ ಸಮಸ್ಯೆ ಇತ್ಯರ್ಥಕ್ಕೆ ರೈತರ ಬೃಹತ್ ಪ್ರತಿಭಟನೆ ನಡೆಸಲು ತಯಾರಿ ಮಾಡಿಕೊಂಡಿದೆ.

ಸರ್ಕಾರಿ ನೇಮಕಾತಿಗಾಗಿ ಆಗ್ರಹಿಸಿ ಯುವ ಸಮೂಹದಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಪಂಚಮಸಾಲಿ ಸಮಾಜದಿಂದ ಮೌನ ಪ್ರತಿಭಟನೆಗೆ ತೀರ್ಮಾನ ಮಾಡಲಾಗಿದ್ದು ಇದನ್ನು ಸರ್ಕಾರ ಹೇಗ ಎದುರಿಸುತ್ತೆ ಕಾದು ನೋಡಬೇಕಿದೆ.

error: Content is protected !!
Scroll to Top