ಹಗರಣದ ಪ್ರಮುಖ ಮಾಹಿತಿ ಡಿಕೆಶಿ ಬಳಿ ಇರುವ ಅನುಮಾನ
ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಇದೇ ಪ್ರಕರಣಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೂ ನೋಟಿಸ್ ಜಾರಿ ಮಾಡಿ ಡಿಸೆಂಬರ್ 19ರೊಳಗೆ ದೆಹಲಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಪ್ರಕರಣದ ಪ್ರಮುಖ ಮಾಹಿತಿ ಡಿಕೆಶಿ ಬಳಿ ಇದೆ ಎಂದು ದೆಹಲಿ ಪೊಲೀಸರು ನಂಬಿದ್ದಾರೆ. ಹೀಗಾಗಿ ಡಿಕೆಶಿಗೆ ನೊಟೀಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ವಿವರವಾದ ಹಣಕಾಸು ಮತ್ತು ವಹಿವಾಟಿನ ಮಾಹಿತಿ ಕೋರಿ ಡಿ.ಕೆ. ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅಕ್ಟೋಬರ್ 3 ರಂದು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಪ್ರಮುಖ ಮಾಹಿತಿ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಡಿಕೆಶಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಯಂಗ್ ಇಂಡಿಯಾಗೆ ಡಿ.ಕೆ ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ವೈಯಕ್ತಿಕವಾಗಿ 2.5 ಕೋಟಿ ರೂ. ದೇಣಿಗೆ ನೀಡಿದ್ದರು. ಇಷ್ಟೇ ಅಲ್ಲದೇ ಡಿಕೆಶಿ ಅವರ ಟ್ರಸ್ಟ್‌ಗಳಿಂದ 2.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಹೀಗಾಗಿ ಈ ಹಿಂದೆ ಡಿಕೆ ಸಹೋದರರನ್ನು ಇ.ಡಿ ವಿಚಾರಣೆ ನಡೆಸಿತ್ತು. ಇದೀಗ ಇದೇ ಪ್ರಕರಣ ಸಂಬಂಧ ಹಣಕಾಸು, ವಹಿವಾಟಿನ ವಿವರಗಳನ್ನು ಕೋರಿ ದೆಹಲಿ ಪೊಲೀಸ್, ವಿಚಾರಣೆಗೆ ಹಾಜರಾಗುವಂತೆ ಡಿಕೆ ಶಿವಕುಮಾರ್ಗೆ ನೋಟಿಸ್ ನೀಡಿದೆ.
























