ಐದನೇ ದಿನಕ್ಕೆ ಮುಂದುವರಿದ ಇಂಡಿಗೋ ಬಿಕ್ಕಟ್ಟು : ದೇಶಾದ್ಯಂತ ಪ್ರಯಾಣಿಕರ ಪರದಾಟ

ಟಿಕೆಟ್‌ ದರ ಹತ್ತುಪಟ್ಟು ಹೆಚ್ಚಿಸಿದ ಇತರ ವಿಮಾನಗಳು

ನವದೆಹಲಿ: ಇಂಡಿಗೋ ವಿಮಾನ ಸಂಚಾರ ಅವ್ಯವಸ್ಥೆ 5ನೇ ದಿನವೂ ಮುಂದುವರಿದಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಎಲ್ಲೆಡೆ ಪ್ರಯಾಣಿಕರ ಪರದಾಟ ಮುಂದುವರಿದಿದೆ.

ನೂರಾರು ಸಂಖ್ಯೆಯ ಪ್ರಯಾಣಿರರು ಏರ್ಪೋರ್ಟ್‌ನಲ್ಲೇ ಕಾಲ ಕಳೆಯುವಂತಾಗಿದೆ. ಇಂಡಿಗೋ ಏರ್‌ಲೈನ್ಸ್‌ ವಿರುದ್ಧ ಆಕ್ರೋಶ ಪ್ರಯಾಣಿಕರು ವ್ಯಕ್ತಪಡಿಸುತ್ತಿದ್ದು, ಏರ್‌ಪೋರ್ಟ್‌ ಸಿಬ್ಬಂದಿ ನಮಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಕೊನೇ ಕ್ಷಣದಲ್ಲಿ ವಿಮಾನ ಹಾರಾಟ ರದ್ದು ಎಂದು ಹೇಳುತ್ತಿದ್ದಾರೆ. 2 ದಿನದಲ್ಲಿ ನಿಮ್ಮ ಹಣ ರೀಫಂಡ್‌ ಆಗುತ್ತೆ ಅಂತಾ ಹೇಳುತ್ತಾರೆ. ನಮಗೆ ಹಣ ಮುಖ್ಯವಲ್ಲ, ಕೆಲವರು ವ್ಯವಹಾರದ ಮೇಲೆ ಹೋಗುತ್ತಾರೆ, ಇನ್ನೂ ಕೆಲವರು ಪರ್ಸನಲ್ ಕೆಲಸದ ಮೇಲೆ ಬೇರೆ ಬೇರೆ ಕಡೆ ಹೋಗಬೇಕಾಗುತ್ತೆ. ಇವತ್ತು ನೋಡಿದ್ರೆ ಯಾವುದೇ ಮಾಹಿತಿಯಿಲ್ಲದೆ ವಿಮಾನ ವಿಳಂಬ ಆಗ್ತಿದೆ. ಕೆಲವು ಸಂಪೂರ್ಣ ಕ್ಯಾನ್ಸಲ್ ಆಗಿದೆ. ಕುಟುಂಬ ಸಮೇತ ಹೋಗ್ಬೇಕಿತ್ತು ಎಂದು ಪ್ರಯಾಣಿಕರು ಗೋಳಾಡುತ್ತಿದ್ದಾರೆ.





















































 
 

ಇಂಡಿಗೋ ಏರ್‌ಲೈನ್‌ನಲ್ಲಿ ಸಿಬ್ಬಂದಿ ಕೊರತೆಯಿಂದ ಸೃಷ್ಠಿಯಾದ ಆವಾಂತರ ಅಂತಿಂಥದ್ದಲ್ಲ. ಕಳೆದ ನಾಲ್ಕು ದಿನಗಳಲ್ಲಿ ಇಂಡಿಗೋದ ಒಂದು ಸಾವಿರಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದ್ದು ಜನರು ವಿಮಾನ ನಿಲ್ದಾಣಗಳಲ್ಲಿ ಪರದಾಡುತ್ತಿದ್ದಾರೆ. ಆರಂಭದಲ್ಲಿ ಸಣ್ಣ ಸಮಸ್ಯೆಯಂತೆ ಭಾಸವಾದ ಇದು ಒಂದೆರಡು ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಮಾನಗಳಿದ್ದರೂ ಅದನ್ನು ಆಪರೇಟ್ ಮಾಡಲು ಸಿಬ್ಬಂದಿಗಳಿಲ್ಲದ ಸನ್ನಿವೇಶ ಇಂಡಿಗೋಗೆ ಬಂದಿದೆ. ಇದೇ ಕಾರಣದಿಂದಲೇ ದೆಹಲಿ, ಬೆಂಗಳೂರು, ಲಖನೌ, ಜಮ್ಮು ಕಾಶ್ಮೀರ, ಚೆನ್ನೈ, ಹೈದರಾಬಾದ್, ಭೋಪಾಲ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಪೂರ್ಣವಾಗಿ ವಿಮಾನಗಳ ಹಾರಾಟ ರದ್ದು ಮಾಡಿರುವುದಾಗಿ ಇಂಡಿಗೋ ಘೋಷಣೆ ಮಾಡಿದೆ.

ಬುಕ್ ಮಾಡಿರುವ ವಿಮಾನಗಳು ಒಂದು ಕಡೆ ನಿರಂತರವಾಗಿ ವಿಳಂಬವಾಗಿ ಹತ್ತಾರು ಗಂಟೆಗಳ ಬಳಿಕ ರದ್ದಾದ ಹಿನ್ನೆಲೆ ಪ್ರಯಾಣಿಕರು ವಿಮಾನ ನಿಲ್ದಾಣದ ಹೊರಗೆ ಮತ್ತು ಒಳಗೆ ಪ್ರತಿಭಟನೆ ನಡೆಸಿದರು. ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡರು.

ಇದೇ ಪರಿಸ್ಥಿತಿಯ ಲಾಭ ಪಡೆದಿರುವ ಇತರ ಏರ್‌ಲೈನ್‌ಗಳು ಏರ್‌ಫೇರ್ ನಿಯಮಗಳನ್ನು ಉಲ್ಲಂಘಿಸಿ ಟಿಕೆಟ್‌ಗಳ ಮೇಲೆ ಹತ್ತಕ್ಕಿಂತ ಹೆಚ್ಚು ಪಟ್ಟು ಬೆಲೆಯನ್ನು ಏರಿಕೆ ಮಾಡಿವೆ. 5 ರಿಂದ 8 ಸಾವಿರ ರೂಪಾಯಿಗೆ ಸಿಗಬೇಕಿದ್ದ ಎಕಾನಮಿ ಟಿಕೆಟ್‌ಗಳು 50 ರಿಂದ 80 ಸಾವಿರ ರೂಪಾಯಿವರೆಗೂ ಏರಿಕೆಯಾಗಿವೆ. ಈ ಬಗ್ಗೆ ವಿರೋಧ ಪಕ್ಷಗಳು ಸಂಸತ್‌ನಲ್ಲಿ ಧ್ವನಿ ಎತ್ತುತ್ತಿದ್ದಂತೆ ಸರ್ಕಾರ ಮಧ್ಯಪ್ರವೇಶ ಮಾಡಿದೆ.

ಶುಕ್ರವಾರ ಒಂದೇ ದಿನ ಸಾವಿರಕ್ಕೂ ಹೆಚ್ಚು ವಿಮಾನಗಳು ರದ್ದಾದ ನಂತರ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಡಿ.15ರೊಳಗೆ ವಿಮಾನ ಸಂಚಾರ ಸಹಜ ಸ್ಥಿತಿಗೆ ಬರಲಿದೆ ಎಂದು ಭರವಸೆ ನೀಡಿದ್ದಾರೆ. ಡಿ.10 ರಿಂದ 15 ರ ಒಳಗೆ ವಿಮಾನ ಸಂಚಾರ ಸಹಜ ಸ್ಥಿತಿಗೆ ಬರಲಿದೆ. ಆದರೆ ಕಾರ್ಯಾಚರಣೆಗಳ ಪ್ರಮಾಣದಿಂದಾಗಿ ಸುಧಾರಣೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ಇಂಡಿಗೋ ಸಿಇಒ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ನಾವು ತೀವ್ರ ಕಾರ್ಯಾಚರಣೆಯ ಅಡಚಣೆಗಳನ್ನು ಅನುಭವಿಸಿದ್ದೇವೆ ಎಂಬುದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅಂದಿನಿಂದ, ಬಿಕ್ಕಟ್ಟು ಉಲ್ಬಣಗೊಳ್ಳುತ್ತಲೇ ಇದೆ. ಶುಕ್ರವಾರ 1,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದು ಅತ್ಯಂತ ತೀವ್ರವಾಗಿ ಪರಿಣಾಮ ಬೀರಿದ ದಿನವಾಗಿದೆ ಎಂದು ಸಿಇಒ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಇಂಡಿಗೋ ತೀವ್ರ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿದೆ. ಆದರೆ ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಿಇಒ ಒತ್ತಿ ಹೇಳಿದ್ದಾರೆ. ಉಂಟಾದ ಅನಾನುಕೂಲತೆಗಾಗಿ ಅವರು ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದಾರೆ.

error: Content is protected !!
Scroll to Top