ಬೆಂಗಳೂರು: ಹಗ್ಗವನ್ನು ಪತ್ನಿಯ ಕತ್ತಿಗೆ ಸುತ್ತಿ ಕೊಲೆಗೈದು, ಬಳಿಕ ತಾನೂ ಅದೇ ಹಗ್ಗದಿಂದ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೇಬಿ (60) ಎಂಬವರೇ ಕೊಲೆಯಾದ ದುರ್ದೈವಿ. ಇವರ ಪತಿ ವೆಂಕಟೇಶನ್ (65) ಎಂಬವರೇ ಕೊಲೆ ನಡೆಸಿದ್ದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೆಂಕಟೇಶನ್ ಅವರು ಬಿಎಂಟಿಸಿ ಚಾಲಕನಾಗಿ ಕೆಲಸ ಮಾಡಿದ್ದು, ಸದ್ಯ ನಿವೃತ್ತಿ ಹೊಂದಿದ್ದರು.
ಪತ್ನಿ ಸ್ಟ್ರೋಕ್ ಕಾರಣದಿಂದ ಹಾಸಿಗೆ ಹಿಡಿದಿದ್ದರು. ಈ ದಂಪತಿಯ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದು, ಅವರು ಮನೆಯಲ್ಲಿಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ. ಯಾವುದೋ ಕಾರಣಕ್ಕೆ ಜಗಳವಾಗಿ ಅದು ವಿಕೋಪಕ್ಕೆ ತಿರುಗಿದ್ದು ಇದು ಇಬ್ಬರ ಸಾವಿನಲ್ಲಿ ಅಂತ್ಯವಾಗಿದೆ.
ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
























