ವೃದ್ಧ ದಂಪತಿಯನ್ನು ಡಿಜಿಟಲ್ ಅರೆಸ್ಟ್ ಮಾಡಿ ಹಣ ದೋಚಲು ಯತ್ನಿಸಿದ್ದ ಸೈಬರ್ ಚೋರರು
ಮಂಗಳೂರು : ಬ್ಯಾಂಕ್ ಮ್ಯಾನೇಜರ್ ಒಬ್ಬರ ಸಮಯಪ್ರಜ್ಞೆಯಿಂದಾಗಿ ಸೈಬರ್ ವಂಚಕರ ಪಾಲಾಗುತ್ತಿದ್ದ ವೃದ್ಧ ದಂಪತಿಯ ಬರೋಬ್ಬರಿ 84 ಲ.ರೂ. ಉಳಿದಿದೆ. ಕಿನ್ನಿಗೋಳಿಯ ಸಮೀಪದ ದಾಮಸ್‌ಕಟ್ಟೆ ವೃದ್ಧ ದಂಪತಿಯನ್ನು ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಮಾಎಡಿ ಬೆದರಿಸಿ ಹಣ ಲೂಟಿ ಮಾಡಲು ಯತ್ನಿಸಿದ್ದರು.
ಡಿಸೆಂಬರ್ 1ರಂದು ಸಂಜೆ ವಂಚಕರ ತಂಡವೊಂದು ಕಿನ್ನಿಗೋಳಿಯ ದಾಮಸ್ ಕಟ್ಟೆಯ ವೃದ್ಧ ದಂಪತಿಗೆ ಕರೆ ಮಾಡಿ ನೀವು ಯಾರದ್ದೋ ಖಾತೆಯಿಂದ 6 ಕೋ. ರೂ. ವಿದ್‌ಡ್ರಾ ಮಾಡಿದ್ದೀರಿ. ನಿಮ್ಮ ಖಾತೆಯಲ್ಲಿ ಈ ವಹಿವಾಟು ದಾಖಲಾಗಿದೆ ಎಂದು ಹೇಳಿ ವೃದ್ಧ ದಂಪತಿಯನ್ನು ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡಿದೆ. ಬಳಿಕ ವೃದ್ಧ ದಂಪತಿಗೆ ನಿಮ್ಮ ಖಾತೆಯಲ್ಲಿರುವ 84 ಲ.ರೂ. ಪಾವತಿಸಿ ಈ ಕೇಸಿನಿಂದ ಪಾರಾಗಿ ಇಲ್ಲದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ.
ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬೇಡಿ. ಒಂದು ವೇಳೆ ನೀವು ಮನೆಯಿಂದ ಹೊರಗೆ ಕಾಲಿಟ್ಟರೆ ನಮ್ಮ ಸಿಬ್ಬಂದಿ ಗುಂಡು ಹಾರಿಸುತ್ತಾರೆ ಎಂದು ವಂಚಕರು ದಂಪತಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಗಾಬರಿಗೊಂಡ ದಂಪತಿ ಕಿನ್ನಿಗೋಳಿಯ ತಮ್ಮ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿ ತಮ್ಮ ಎಫ್‌ಡಿ ಯಲ್ಲಿದ್ದ 84 ಲಕ್ಷ ರೂ. ತಕ್ಷಣವೇ ಉಳಿತಾಯ ಖಾತೆಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಆಗಲೇ ಬ್ಯಾಂಕ್ ಮ್ಯಾನೇಜರ್‌ಗೆ ಅನುಮಾನ ಬಂದಿದೆ. ಯಾಕೆ ಇಷ್ಟೊಂದು ಹಣ ಎಂದು ಕೇಳಿದಾಗ ವೃದ್ಧರು ಬೆಂಗಳುರಿನಲ್ಲಿ ಸೈಟ್ ಖರೀದಿಸುತ್ತಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ.
ಡಿಸೆಂಬರ್ 3ರಂದು ಬೆಳಿಗ್ಗೆ, ವೃದ್ಧ ದಂಪತಿ ಒತ್ತಡಕ್ಕೆ ಮಣಿದು ಎಫ್‌ಡಿಯಲ್ಲಿದ್ದ ಹಣವನ್ನು ಉಳಿತಾಯ ಖಾತೆಗೆ ವರ್ಗಾಯಿಸಿದ್ದು, ಇದರಿಂದ ಬ್ಯಾಂಕ್ ಮ್ಯಾನೇಜರ್‌ಗೆ ಸಂಶಯ ದಟ್ಟವಾಗಿದ್ದು, ತಕ್ಷಣವೇ ಮೂಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ತಕ್ಷಣವೇ ದಂಪತಿಯ ಮನೆಗೆ ಭೇಟಿ ನೀಡಿದರು. ಪರಿಶೀಲನೆಯ ನಂತರ ದಂಪತಿ ಡಿಜಿಟಲ್ ಅರೆಸ್ಟ್ ಆಗಿರುವುದು ಬೆಳಕಿಗೆ ಬಂದಿದೆ.
ಕೂಡಲೇ ಎಚ್ಚೆತ್ತ ಪೊಲೀಸರು ವೃದ್ಧ ದಂಪತಿಯ 84 ಲಕ್ಷ ರೂ. ಫ್ರೀಜ್ ಮಾಡಲು ಮ್ಯಾನೇಜರ್‌ಗೆ ಹೇಳಿದರು. ಇದರಿಂದಾಗಿ ವಂಚಕರಿಗೆ ಹಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ಮ್ಯಾನೇಜರ್ ಸಮಯೋಚಿತ ಕ್ರಮದಿಂದ ದಂಪತಿಗಳು ವಂಚನೆಯಿಂದ ಪಾರಾಗಿದ್ದಾರೆ. ಮ್ಯಾನೇಜರ್ ಸಮಯಪ್ರಜ್ಷೆಗೆ ಪ್ರಶಂಸೆ ವ್ಯಕ್ತವಾಗಿದೆ.
























