ಬಗೆಹರಿಯದ ಇಂಡಿಗೋ ತಾಂತ್ರಿಕ ಅಡಚಣೆ : 300ಕ್ಕೂ ಅಧಿಕ ವಿಮಾನ ಯಾನ ರದ್ದು

ಮೂರನೇ ದಿನವೂ ಪ್ರಯಾಣಿಕರ ಪರದಾಟ ; ಸಂಸ್ಥೆಯ ಉನ್ನತಾಧಿಕಾರಿಗಳಿಗೆ ಸರ್ಕಾರದ ಬುಲಾವ್‌

ಬೆಂಗಳೂರು : ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಉಂಟಾಗಿರುವ ಭಾರಿ ಅಡಚಣೆ ಮೂರನೇ ದಿನವಾದ ಗುರುವಾರವೂ ಮುಂದುವರಿದಿದೆ. ನಿನ್ನೆ ದೆಹಲಿ, ಮುಂಬೈ, ಬೆಂಗಳೂರು ಏರ್‌ಪೋರ್ಟ್‌ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಿಂದ ಸುಮಾರು 200 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಇನ್ನು ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬ ಕಂಡುಬಂದಿತ್ತು. ಈ ಸಮಸ್ಯೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದೆ.

ವಿಮಾನದಲ್ಲಿನ ತಾಂತ್ರಿಕ ದೋಷ ಹಾಗೂ ಸಿಬ್ಬಂದಿ ಕೊರತೆ ಇತರ ಸಮಸ್ಯೆಗಳಿಂದ ಇಂದು ಸಹ ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ವ್ಯಾಪಕ ವಿಳಂಬ ಮತ್ತು ರದ್ದತಿಯಿಂದಾಗಿ ದೇಶಾದ್ಯಂತ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.





















































 
 

ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ನಲ್ಲೂ ತಾಂತ್ರಿಕ ದೋಷ ಉಂಟಾಗಿರುವ ಪರಿಣಾಮ 73 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ನಿನ್ನೆ 43 ವಿಮಾನಗಳ ಹಾರಾಟ ರದ್ದುಗೊಳಿಸಿದ್ದ ಇಂಡಿಗೋ ಇಂದು 73 ವಿಮಾನ ಹಾರಾಟ ರದ್ದುಗೊಳಿಸಿದೆ.

ಇಂಡಿಗೋ ವಿಮಾನಗಳ ವಿಳಂಬ ಮತ್ತು ರದ್ದತಿಗಳ ಹಿಂದಿನ ಕಾರಣಗಳನ್ನ ವಿವರಿಸುವಂತೆ ಮತ್ತು ಪರಿಸ್ಥಿತಿ ಸುಧಾರಿಸಲು ಒಂದು ಯೋಜನೆ ನೀಡುವಂತೆ ಡಿಜಿಸಿಎ ಇಂಡಿಗೋಗೆ ಸೂಚಿಸಿದೆ. ಅಲ್ಲದೇ ಈ ಕುರಿತು ಇಂದು ಮಧ್ಯಾಹ್ನ ನಡೆಯಲಿರುವ ಉನ್ನತ ಮಟ್ಟದ ಸಭೆಗೆ ಇಂಡಿಗೋ ಅಧಿಕಾರಿಗಳಿಗೆ ಬುಲಾವ್‌ ನೀಡಿದೆ.

ಉಂಟಾಗಿರುವ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಇಂಡಿಗೋ ಸಂಸ್ಥೆ, 48 ಗಂಟೆಗಳಲ್ಲಿ ಪರಿಸ್ಥಿತಿ ಸುಧಾರಿಸುವ ಭರವಸೆ ನೀಡಿದೆ. ಜೊತೆಗೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದೆ.

ಸಣ್ಣಪುಟ್ಟ ತಾಂತ್ರಿಕ ದೋಷಗಳು, ಚಳಿಗಾಲದ ವೇಳಾಪಟ್ಟಿಯ ಹೊಂದಾಣಿಕೆ, ಪ್ರತಿಕೂಲ ಹವಾಮಾನ ಪರಿಸ್ಥಿತಿ, ವಿಮಾನ ನಿಲ್ದಾಣದಲ್ಲಿನ ದಟ್ಟಣೆ ಹಾಗೂ ನವೀಕರಿಸಿದ ಸಿಬ್ಬಂದಿ ರೋಸ್ಟರಿಂಗ್ ನಿಯಮಗಳ ಅನುಷ್ಠಾನ ಸೇರಿದಂತೆ ಅನಿರೀಕ್ಷಿತ ಕಾರ್ಯಾಚರಣೆ ಸವಾಲುಗಳು ಅಡಚಣೆಗೆ ಕಾರಣವಾಗಿದೆ. ಇದನ್ನು ನಾವು ಊಹಿಸಿಯೂ ಇರಲಿಲ್ಲ. ಹಾಗಾಗಿ ಸಿಬ್ಬಂದಿ ಲಭ್ಯತೆಗೆ ಅನುಗುಣವಾಗಿ ಕಾರ್ಯಾಚರಣೆ ಸ್ಥಿರಗೊಳಿಸಲು ಕೆಲ ವಿಮಾನಗಳ ವೇಳಾಪಟ್ಟಿ ಬದಲಾವಣೆ ಮತ್ತು ರದ್ದು ಆಗಿದೆ ಎಂದು ತಿಳಿಸಿದೆ.

error: Content is protected !!
Scroll to Top