ದುರ್ಬಲ ಬೌಲಿಂಗ್‌, ಕಳಪೆ ಫೀಲ್ಡಿಂಗ್‌ನಿಂದಾಗಿ ಸೋತ ಭಾರತ

358 ರನ್‌ ಮಾಡಿದರೂ ಗೆಲ್ಲಲಾಗದೆ ಸರಣಿ 1-1 ಸಮಬಲ

ರಾಯ್‌ಪುರ : ಬರೋಬ್ಬರಿ ಎರಡು ಶತಕಗಳ ನೆರವಿನೊಂದಿಗೆ 358 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿದರೂ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಸೋತಿದೆ. ರಾಂಚಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು ಕೊನೆಯ ಓವರ್​ನಲ್ಲಿ ಗೆದ್ದಿಕೊಂಡಿದ್ದ ಟೀಂ ಇಂಡಿಯಾ ರಾಯ್‌ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಕೊನೆಯ ಓವರ್​ನಲ್ಲಿ ಸೋತಿದೆ. ಕಳಪೆ ಫೀಲ್ಡಿಂಗ್, ಬೌಲಿಂಗ್‌ಗೆ ಭಾರತ ಭಾರಿ ಬೆಲೆತೆತ್ತಿದೆ.

ಟೀಂ ಇಂಡಿಯಾ ಬ್ಯಾಟರ್​ಗಳು ಕಲೆಹಾಕಿದ್ದ 358 ರನ್​ಗಳನ್ನು ತಂಡದ ಅನನುಭವಿ ಬೌಲಿಂಗ್ ವಿಭಾಗ ರಕ್ಷಿಸಲು ವಿಫಲವಾಯಿತು. ಇದರ ಜೊತೆಗೆ ಆಫ್ರಿಕಾ ಗೆಲುವಿನಲ್ಲಿ ಇಬ್ಬನಿಯೂ ಪ್ರಮುಖ ಪಾತ್ರವಹಿಸಿತು. ಪಂದ್ಯದಲ್ಲಿ ಟಾಸ್ ಸೋತು ಮತ್ತೊಮ್ಮೆ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 358 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೊನೆಯ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು. ಭಾರತದ ಪರ ವಿರಾಟ್ ಕೊಹ್ಲಿ ಹಾಗೂ ರುತುರಾಜ್ ಗಾಯಕ್ವಾಡ್ ಶತಕ ಬಾರಿಸಿದರೆ, ಆಫ್ರಿಕಾ ಪರ ಐಡೆನ್ ಮಾರ್ಕ್ರಾಮ್ ಶತಕ ಬಾರಿಸಿದರು. ಹೀಗೆ ಒಟ್ಟು ಮೂರು ಶತಕ ಈ ಪಂದ್ಯದಲ್ಲಿ ದಾಖಲಾಯಿತು.





















































 
 

ರಾಯ್‌ಪುರದಲ್ಲಿಯೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮತ್ತೊಮ್ಮೆ ದೊಡ್ಡ ಸ್ಕೋರ್ ಗಳಿಸಿತು. ಸತತ ಎರಡನೇ ಪಂದ್ಯದಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ ಕೊಹ್ಲಿ ತಮ್ಮ 53ನೇ ಏಕದಿನ ಶತಕವನ್ನು ದಾಖಲಿಸಿದರು. ಇತ್ತ ರುತುರಾಜ್ ಗಾಯಕ್ವಾಡ್ ಕೂಡ ಕೇವಲ 77 ಎಸೆತಗಳಲ್ಲಿ ತಮ್ಮ ಮೊದಲ ಏಕದಿನ ಶತಕವನ್ನು ಬಾರಿಸಿದರು. ಇಬ್ಬರೂ ಮೂರನೇ ವಿಕೆಟ್‌ಗೆ 195 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡರು. ನಾಯಕ ಕೆ.ಎಲ್ ರಾಹುಲ್ ಕೂಡ ಅಂತಿಮ ಓವರ್‌ಗಳಲ್ಲಿ ಕೇವಲ 43 ಎಸೆತಗಳಲ್ಲಿ 66 ರನ್‌ಗಳ ಇನ್ನಿಂಗ್ಸ್ ಆಡಿದರು.

ಒಂದು ಹಂತದಲ್ಲಿ ಟೀಂ ಇಂಡಿಯಾ 400 ರನ್‌ಗಳ ಹತ್ತಿರ ತಲುಪಬಹುದಾಗಿದ್ದರೂ, ರವೀಂದ್ರ ಜಡೇಜ ಮತ್ತು ಯಶಸ್ವಿ ಜೈಸ್ವಾಲ್ ಅವರ ನಿಧಾನಗತಿಯ ಇನ್ನಿಂಗ್ಸ್ ಅದಕ್ಕೆ ತಡೆಯೊಡ್ಡಿತು. ಕೊನೆಯ 10 ಓವರ್‌ಗಳಲ್ಲಿ ಭಾರತ ಕೇವಲ 74 ರನ್‌ಗಳನ್ನು ಗಳಿಸಿತು. ಇದು ತಂಡವನ್ನು ಕೇವಲ 358 ರನ್​ಗಳಿಗೆ ನಿಲ್ಲಿಸಿತು.

ಭಾರತ ತಂಡದ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಕೆಲ ಉತ್ತಮ ಹೊಡೆತಗಳನ್ನ ಹೊಡೆದು ರಂಜಿಸಿದರಾದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲರಾಗಲಿಲ್ಲ. ನಾಂಡ್ರೆ ಬರ್ಗರ್ ಬೌಲಿಂಗ್‌ನಲ್ಲಿ ಸತತ 3 ಬೌಂಡರಿ ಬಾರಿಸಿದ್ದ ರೋಹಿತ್ ಶರ್ಮಾ 4ನೇ ಎಸೆತದಲ್ಲಿ ಎಡವಿ ಕೀಪರ್ ಡಿಕಾಕ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ 22 ರನ್ ಗಳಿಸಿದ್ದ ಜೈಸ್ವಾಲ್ ಅವರು ಮಾರ್ಕೋ ಜಾನ್ಸೆನ್‌ ಬೌಲಿಂಗ್ ನಲ್ಲಿ ಬಾಷ್‌ಗೆ ಕ್ಯಾಚ್ ನೀಡಿ ಔಟಾದರು.

ಇಲ್ಲಿಂದ ಬಳಿಕ ಒಂದಾದ ಋತುರಾಜ್‌ – ಕೊಹ್ಲಿ ತಂಡಕ್ಕೆ ಭದ್ರಬುನಾದಿ ಹಾಕಿದರು. ಪರಿಣಾಮ ಭಾರತ ತಂಡ ಕೇವಲ 29.5 ಓವರ್‌ಗಳಲ್ಲೇ 200ರ ಗಟಿ ದಾಟಿತು. ಅಂತಿಮ ಹಂತದಲ್ಲಿ ನಾಯಕ ಕೆ.ಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರು ಮುರಿಯದ 6ನೇ ವಿಕೆಟ್‌ಗೆ 69 ರನ್ ಗಳ ಜೊತೆಯಾವಾಡಿದರು. ಕೆ.ಎಲ್ ರಾಹುಲ್ ಅವರು 43 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 66 ರನ್‌ ಗಳಿಸಿದ್ರೆ, ರವೀಂದ್ರ ಜಡೇಜಾ 27 ಎಸೆತಗಳಲ್ಲಿ 2 ಬೌಂಡರಿ ಸೇರಿ 24 ರನ್ ಗಳಿಸಿದರು.

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ ಕಳಪೆ ಆರಂಭ ಪಡೆಯಿತು. ಆದರೆ ಎರಡನೇ ವಿಕೆಟ್​ಗೆ ನಾಯಕ ಬವುಮಾ ಮತ್ತು ಮಾರ್ಕ್ರಾಮ್ ಶತಕದ ಜೊತೆಯಾಟ ಆಡಿದರು. ಬವುಮಾ 46 ರನ್ ಬಾರಿಸಿ ಔಟಾದರೆ, ಮಾರ್ಕ್ರಾಮ್ ಶತಕ ಸಿಡಿಸಿ ಮಿಂಚಿದರು. ಮಾರ್ಕ್ರಾಮ್ ಅರ್ಧಶತಕ ಬಾರಿಸಿದ ಬೆನ್ನಲ್ಲೇ ಕ್ಯಾಚ್ ನೀಡಿದ್ದರು. ಆದರೆ ಜೈಸ್ವಾಲ್ ಸುಲಭ ಕ್ಯಾಚ್ ಕೈಚೆಲಿದರು. ಇದರ ಲಾಭ ಪಡೆದ ಮಾರ್ಕ್ರಾಮ್ 98 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 110 ರನ್ ಗಳಿಸಿ ಔಟಾದರು.

‌ಮಾರ್ಕ್ರಾಮ್ ಅವರ ವಿಕೆಟ್ ಭಾರತಕ್ಕೆ ಪುನರಾಗಮನದ ಭರವಸೆಯನ್ನು ನೀಡಿತು. ಆದರೆ ಮ್ಯಾಥ್ಯೂ ಬ್ರೆಟ್ಜ್ಕಿ ಮತ್ತು ಡೆವಾಲ್ಡ್ ಬ್ರೆವಿಸ್ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ನಿಭಾಯಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಬ್ರೆವಿಸ್ ಕೇವಲ 34 ಎಸೆತಗಳಲ್ಲಿ 54 ರನ್ ಗಳಿಸಿದರೆ, ಬ್ರೆಟ್ಜ್ಕಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಅಂತಿಮ ಓವರ್‌ಗಳಲ್ಲಿ ಟೀಂ ಇಂಡಿಯಾ ಕೆಲವು ವಿಕೆಟ್‌ಗಳನ್ನು ಪಡೆಯಿತಾದರೂ ಹಿಂದಿನ ಪಂದ್ಯದಂತೆ ಈ ಪಂದ್ಯದಲ್ಲೂ ಕಾರ್ಬಿನ್ ಬಾಷ್ ಕೊನೆಯಲ್ಲಿ ಬಂದು ವೇಗವಾಗಿ ರನ್ ಗಳಿಸಿ ತಂಡವನ್ನು 49.2 ಓವರ್‌ಗಳಲ್ಲಿ ಗೆಲುವಿನತ್ತ ಕೊಂಡೊಯ್ದರು. ಇದು ಭಾರತದಲ್ಲಿ ದಕ್ಷಿಣ ಆಫ್ರಿಕಾದ ಅತ್ಯಧಿಕ ರನ್ ಚೇಸ್ ಆಗಿದೆ. ಇದರೊಂದಿಗೆ, ಸರಣಿ 1-1 ರಲ್ಲಿ ಸಮಬಲಗೊಂಡಿದ್ದು, ಡಿಸೆಂಬರ್ 6ರಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯ ಸರಣಿ ನಿರ್ಧಾರಕವಾಗಲಿದೆ.

error: Content is protected !!
Scroll to Top