ಜಾರ್ಖಂಡ್‌ನಲ್ಲಿ ಸದ್ಯದಲ್ಲೇ ಸರ್ಕಾರ ಬದಲು : ಎನ್‌ಡಿಎ ಸೇರಲು ಜೆಎಂಎಂ ಉತ್ಸುಕ

ಬಿಹಾರದ ಹೀನಾಯ ಸೋಲಿನ ಬಳಿಕ ಇಂಡಿ ಒಕ್ಕೂಟಕ್ಕೆ ಇನ್ನೊಂದು ಹಿನ್ನಡೆಯಾಗುವ ಸಾಧ್ಯತೆ

ನವದೆಹಲಿ: ಬಿಹಾರದಲ್ಲಿ ಹೀನಾಯವಾಗಿ ಸೋತು ಹೋಗಿರುವ ಕಾಂಗ್ರೆಸ್‌ ನೇತೃತ್ವದ ಇಂಡಿ ಮೈತ್ರಿಕೋಟಕ್ಕೆ ಈಗ ಜಾರ್ಖಂಡ್‌ನಲ್ಲೂ ಭಾರಿ ಹಿನ್ನಡೆಯಾಗುವ ಸಾಧ್ಯತೆಯೊಂದು ಗೋಚರಿಸುತ್ತಿದೆ. ಜಾರ್ಖಂಡ್‌ನಲ್ಲಿ ಇಂಡಿ ಒಕ್ಕೂಟದ ಪ್ರಮುಖ ಪಾಲುದಾರನಾಗಿರುವ ಹೇಮಂತ್‌ ಸೊರೇನ್‌ ನೇತೃತ್ವದ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷವೇ ಬಿಜೆಪಿ ನೇತೃತ್ವದ ಎನ್‌ಡಿಎ ತೆಕ್ಕೆಗೆ ಬೀಳಲು ತಯಾರಿ ನಡೆಸಿದೆ ಎನ್ನಲಾಗುತ್ತಿದೆ. ಅಂದ ಹಾಗೇ ಈ ದಿಢೀರ್‌ ರಾಜಕೀಯ ಬೆಳವಣೆಗೆಗೂ ಕಾರಣ ಬಿಹಾರದ ಫಲಿತಾಂಶವೇ ಆಗಿದೆ.

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಪತ್ನಿ ಕಲ್ಪನಾ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳ ನಡುವೆ ರಾಜ್ಯದಲ್ಲಿ ಅಧಿಕಾರ ಬದಲಾವಣೆಯಾಗಲಿದೆ ಎಂಬ ಊಹಾಪೋಹಗಳು ಹರಡಿವೆ. ಹೇಮಂತ್ ಸೊರೆನ್ ಮತ್ತು ಕಲ್ಪನಾ ಸೊರೆನ್ ಕಳೆದ ಹಲವು ದಿನಗಳಿಂದ ದೆಹಲಿಯಲ್ಲಿದ್ದಾರೆ. ಅವರು ಇಂದು ದೆಹಲಿಯಿಂದ ರಾಂಚಿಗೆ ಹಿಂತಿರುಗುವ ಸಾಧ್ಯತೆಯಿದೆ.





















































 
 

ಕಾಂಗ್ರೆಸ್‌ನ 16 ಶಾಸಕರಲ್ಲಿ ಕನಿಷ್ಠ ಎಂಟು ಮಂದಿ ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ಸೋರೆನ್ ನೇತೃತ್ವದ ಹೊಸ ಸರ್ಕಾರ ಸೇರಲು ಮಾತುಕತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಅನರ್ಹತೆಯನ್ನು ತಪ್ಪಿಸಲು ಕನಿಷ್ಠ 11 ಶಾಸಕರು ಕಾಂಗ್ರೆಸ್‌ ಪಕ್ಷದಿಂದ ಹೊರಹೋಗಬೇಕಾಗುತ್ತದೆ.

ಈಗ ಬರುತ್ತಿರುವ ಸುದ್ದಿಯ ಪ್ರಕಾರ ಕಲ್ಪನಾ ಸೊರೆನ್‌ ಅವರು ಮುಖ್ಯಮಂತ್ರಿಯಾದರೆ, ಹೇಮಂತ್ ಸೊರೆನ್ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಜಾರ್ಖಂಡ್‌ ಬಲಾಬಲ

ಜಾರ್ಖಂಡ್‌ನ ಒಟ್ಟು 81 ವಿಧಾನಸಭಾ ಸ್ಥಾನಗಳಲ್ಲಿ ಬಹುಮತಕ್ಕೆ 41 ಸ್ಥಾನಗಳು ಬೇಕಾಗುತ್ತವೆ. ಜೆಎಂಎಂ ನೇತೃತ್ವದ ಅಸ್ತಿತ್ವದಲ್ಲಿರುವ ಇಂಡಿ ಮೈತ್ರಿಕೂಟದಲ್ಲಿ ಜೆಎಂಎಂ 34 ಸ್ಥಾನಗಳನ್ನು ಹೊಂದಿದೆ, ಕಾಂಗ್ರೆಸ್ 16, ರಾಷ್ಟ್ರೀಯ ಜನತಾ ದಳ 4 ಮತ್ತು ಎಡಪಕ್ಷಗಳು 2 ಸ್ಥಾನಗಳನ್ನು ಹೊಂದಿವೆ. ಬಿಜೆಪಿ 21 ಶಾಸಕರನ್ನು ಹೊಂದಿದ್ದರೆ ಎಲ್‌ಜೆಪಿ, ಎಜೆಎಸ್‌ಯು, ಜೆಡಿ(ಯು) ತಲಾ ಒಂದು ಸ್ಥಾನವನ್ನು ಪಡೆದಿವೆ.

ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ಇಂಡಿ ಒಕ್ಕೂಟಕ್ಕೆ ಜೆಎಂಎಂ ಹಲವು ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಈ ಮೈತ್ರಿಯ ಭಾಗವಾಗಿ ಬಿಹಾರದಲ್ಲೂ ನಮಗೆ ಸೀಟ್‌ ನೀಡಬೇಕೆಂದು ಕೇಳಿತ್ತು. ಬಿಹಾರ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಜೆಎಂಎಂ ಸ್ಪರ್ಧಿಸಲು ಬಯಸಿತ್ತು. ಆದರೆ ಆರ್‌ಜೆಡಿ ಮತ್ತು ಕಾಂಗ್ರೆಸ್ ಸೀಟು ಹಂಚಿಕೆ ಮಾಡದ ಕಾರಣ ಕೊನೇಕ್ಷಣದಲ್ಲಿ ಜೆಎಂಎಂ ಸ್ಪರ್ಧಿಸದೆ ಇರಲು ನಿರ್ಧರಿಸಿತ್ತು.

ಮಾತುಕತೆ ಮುರಿದು ಬಿದ್ದ ಬೆನ್ನಲ್ಲೇ ಜೆಎಂಎಂ ನಾಯಕರು ಕಾಂಗ್ರೆಸ್‌ ಮತ್ತು ಆರ್‌ಜೆಡಿಯಿಂದ ನಮಗೆ ಅನ್ಯಾಯವಾಗಿದೆ. ಮುಂದೆ ಮೈತ್ರಿಯ ಬಗ್ಗೆ ಯೋಚಿಸಲಾಗುವುದು ಎಂದು ಅಂದೇ ಹೇಳಿಕೆ ನೀಡಿದ್ದರು. ಅದರ ಪರಿಣಾಮವೇ ಈಗಿನ ಬೆಳವಣಿಗೆ ಎಂದೆನ್ನಲಾಗುತ್ತಿದೆ.

error: Content is protected !!
Scroll to Top