ಭಾರತಕ್ಕೆ ಸರಣಿ ಗೆಲುವಿಗೆ ; ದಕ್ಷಿಣ ಆಫ್ರಿಕಾಕ್ಕೆ ಸರಣಿ ಸಮಬಲಗೊಳಿಸಲು ನಿರ್ಣಾಯಕ ಪಂದ್ಯ
ರಾಯ್‌ಪುರ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಡಿ.3ರಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಂಚಿ ಪಂದ್ಯವನ್ನು ಗೆದ್ದ ನಂತರ 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಸರಣಿಯಲ್ಲಿ ಅಜೇಯ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತಿದೆ.
ಸುಮಾರು ಮೂರು ವರ್ಷಗಳ ನಂತರ ರಾಯ್‌ಪುರ ಏಕದಿನ ಪಂದ್ಯವನ್ನು ಆಯೋಜಿಸುತ್ತಿದೆ, ಆದ್ದರಿಂದ ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ. ಆದರೂ ರಾಯ್‌ಪುರ ಪಿಚ್ನಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ? ಪಂದ್ಯದ ದಿನ ರಾಯ್‌ಪುರದ ಹವಾಮಾನ ಹೇಗಿರಲಿದೆ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಎರಡೂ ತಂಡಗಳು ಸರಣಿಯಲ್ಲಿ ಮುನ್ನಡೆ ಸಾಧಿಸುವ ಗುರಿಯನ್ನು ಹೊಂದಿರುವುದರಿಂದ ಈ ಪಂದ್ಯ ನಿರ್ಣಾಯಕವಾಗಿದೆ. ಒಂದೆಡೆ ಭಾರತ ತನ್ನ ಬೌಲಿಂಗ್ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಅವಲಂಬಿಸಿದ್ದರೆ, ದಕ್ಷಿಣ ಆಫ್ರಿಕಾ ತನ್ನ ಯುವ ಮತ್ತು ಅನುಭವಿ ಆಟಗಾರರನ್ನು ಅವಲಂಬಿಸಿ ಪಂದ್ಯವನ್ನು ಗೆಲ್ಲಲು ಎದುರು ನೋಡುತ್ತಿದೆ. ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದೆ.
ಈ ಮೈದಾನದಲ್ಲಿ ಇಲ್ಲಿಯವರೆಗೆ ಒಂದೇ ಒಂದು ಏಕದಿನ ಪಂದ್ಯ ನಡೆದಿದೆ. ಈ ಪಂದ್ಯವು ಜನವರಿ 21, 2023ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದಿದ್ದು, ಇದರಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 108 ರನ್‌ಗಳಿಗೆ ಆಲೌಟ್ ಆಯಿತು. ಭಾರತ 21ನೇ ಓವರ್‌ನಲ್ಲಿ 8 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದರೆ, ವಿರಾಟ್ ಕೊಹ್ಲಿ ಕೇವಲ 11 ರನ್ ಗಳಿಸಿದ್ದರು.
ಸಾಮಾನ್ಯವಾಗಿ ಗೆಲುವಿನ ಸಂಯೋಜನೆಯನ್ನು ಬದಲಿಸಲು ಯಾರೂ ಯೋಚಿಸುವುದಿಲ್ಲ. ಆದಾಗ್ಯೂ ಮೊದಲ ಏಕದಿನದಲ್ಲಿ ಆರಂಭಿಕ ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಒಂದು ವೇಳೆ ಪ್ಲೇಯಿಂಗ್ 11 ಬದಲಿಸಲು ನೋಡಿದರೆ, ಜೈಸ್ವಾಲ್ರನ್ನು ಹೊರಗಿಟ್ಟು, ರುತುರಾಜ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದು. ಏಕೆಂದರೆ ರುತುರಾಜ್ ಆರಂಭಿಕರಾಗಿಯೇ ಹೆಚ್ಚು ಯಶಸ್ಸು ಸಾಧಿಸಿದ್ದಾರೆ. ಇದು ನಿಜವಾದರೆ, ರುತುರಾಜ್ ಸ್ಥಾನಕ್ಕೆ ತಿಲಕ್ ವರ್ಮಾ ಬರಬಹುದು. ತಿಲಕ್ ವರ್ಮಾಗೆ ಮಧ್ಯಮ ಕ್ರಮಾಂಕದಲ್ಲಿ ಆಡಿದ ಅನುಭವವಿದೆ. ಅಲ್ಲದೆ ಪರಿಸ್ಥಿತಿಗೆ ಅನುಗುಣವಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ, ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಆಯ್ಕೆ ಎಂದು ಪರಿಗಣಿಸಲಾಗಿದೆ.
ಮೊದಲ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ವಿಶೇಷವಾಗಿ ಕುಲದೀಪ್ ಯಾದವ್ ಮತ್ತು ಹರ್ಷಿತ್ ರಾಣಾ ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದ್ದರಿಂದ, ಈ ಇಬ್ಬರು ಖಂಡಿತವಾಗಿಯೂ ಎರಡನೇ ಏಕದಿನ ಪಂದ್ಯದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಭಾರತ ಮತ್ತೊಮ್ಮೆ 3 ಸ್ಪಿನ್ನರ್‌ಗಳು ಮತ್ತು 3 ವೇಗಿಗಳ ಸಂಯೋಜನೆಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ನಿತೀಶ್ ರೆಡ್ಡಿ ಮತ್ತು ರಿಷಭ್ ಪಂತ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ.
ಭಾರತದ ಸಂಭಾವ್ಯ ತಂಡ
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್/ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್/ತಿಲಕ್ ವರ್ಮಾ, ಕೆಎಲ್ ರಾಹುಲ್ (ನಾಯಕ ಮತ್ತು ವಿಕೆಟ್ ಕೀಪರ್), ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್.
ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ
ಏಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ಕ್ವಿಂಟನ್ ಡಿ ಕಾಕ್, ಮ್ಯಾಥ್ಯೂ ಬ್ರೀಟ್ಜ್ಕೆ, ಟೆಂಬಾ ಬವುಮಾ (ನಾಯಕ), ಡೆವಾಲ್ಡ್ ಬ್ರೂವಿಸ್, ಕಾರ್ಬಿನ್ ಬಾಷ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಒಟ್ನಿಯೆಲ್ ಬಾರ್ಟ್‌ಮನ್, ನಾಂದ್ರೆ ಬರ್ಗರ್.
























