ಪ್ರೀತಿಸುತ್ತಿದ್ದ ಹುಡುಗಿಯ ಮನೆಯವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು
ಬಂಟ್ವಾಳ : ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿರುವ ರಮಾನಂದ ಎಂಬ ಯುವಕನ ಸಾವಿನ ಬಗ್ಗೆ ತಾಯಿ ಅನುಮಾನ ವ್ಯಕ್ತಪಡಿಸಿದ್ದು, ಮರು ತನಿಖೆ ಆಗ್ರಹಿಸಿ ದೂರು ನೀಡಿದ್ದಾರೆ. ಇದು ಆತ್ಮಹತ್ಯೆ ಅಲ್ಲ ವ್ಯವಸ್ಥಿತ ಕೊಲೆಯಾಗಿರುವ ಬಗ್ಗೆ ಸಂಶಯವಿದ್ದು, ಈ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ನ್ಯಾಯ ಒದಗಿಸಿ ಕೊಡಿ ಎಂದು ತಾಯಿ ಜಾನಕಿ ಅವರು ವಾಮಂಜೂರು ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳದ ಬರಿಮಾರು ಗ್ರಾಮದ ದೇಲಬೆಟ್ಟು ನಿವಾಸಿ ರಮಾನಂದ (25) ಎಂಬವರು ನ.25ರಂದು ನಾಪತ್ತೆಯಾಗಿದ್ದ ಕುರಿತು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಅದೇ ದಿನ ಮಧ್ಯಾಹ್ನ ಅವರ ಮೃತದೇಹ ಮಂಗಳೂರು ತಾಲೂಕಿನ ವಾಮಂಜೂರು ಕೆತ್ತಿಕಲ್ಲು ಎಂಬಲ್ಲಿ ಪತ್ತೆಯಾಗಿದೆ. ರಮಾನಂದ ಅವರ ಮೃತದೇಹ ಕೆತ್ತಿಕಲ್ಲು ಎಂಬಲ್ಲಿ ಗುಡ್ಡದಲ್ಲಿ ಮರದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಇತ್ತು, ಮೇಲ್ನೋಟಕ್ಕೆ ಈತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿ ಕಾಣಿಸುತ್ತಿತ್ತು. ಹಗ್ಗ ತುಂಡಾಗಿ ಕೆಳಗೆ ಬಿದ್ದಂತೆ ಕಾಣಿಸಿಕೊಂಡಿದ್ದು, ವಾಮಂಜೂರು ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು.
ಆದರೆ ಮನೆಯವರಿಗೆ ಈತನ ಸಾವಿನ ಬಗ್ಗೆ ಸಂಶಯವಿದ್ದು, ಇದೊಂದು ವ್ಯವಸ್ಥಿತ ರೀತಿಯ ಕೊಲೆಯಾಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ. ಸೂಕ್ತವಾದ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡುವಂತೆ ತಾಯಿ ಠಾಣೆಯ ಮೆಟ್ಟಿಲು ಏರಿದ್ದಾರೆ.
ರಮಾನಂದ ಮೂರು ವರ್ಷಗಳಿಂದ ವಾಮಂಜೂರು ಭಾಗದ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಕೆಲ ದಿನಗಳಿಂದ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂದಿದ್ದು, ಕುಟುಂಬಿಕರು ಈತನಿಗೆ ಬೆದರಿಕೆ ಹಾಕಿದ್ದಾರೆ ಎಂಬ ದೂರು ಮನೆಯವರದ್ದು. ಹಾಗಾಗಿ ಹುಡುಗಿಯ ಜೊತೆ ಮನೆಯವರು ಸೇರಿ ಈತನನ್ನು ಕೊಲೆ ಮಾಡಿದ್ದಾರೆ ಎಂಬ ದೂರನ್ನು ತಾಯಿ ಜಾನಕಿ ಅವರು ನೀಡಿದ್ದಾರೆ.
























