ಮಂಗಳೂರು: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿಮಾ ಪರಿಹಾರ ಪಾವತಿ ವಿಳಂಬವಾಗಿದ್ದು ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಶೀಘ್ರ ವಿಮಾ ಮೊತ್ತ ಪಾವತಿಗೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಕಳೆದ ವಾರ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ವಿಳಂಬಕ್ಕೆ ಕಾರಣ ಏನು ಎಂಬುದರ ಬಗ್ಗೆ ಪರಾಮರ್ಶಿಸಿದ್ದರು. ಹಾಗೆಯೇ ತುರ್ತಾಗಿ ವಿಮಾ ಮೊತ್ತ ಬಿಡುಗಡೆ ಮಾಡುವಂತೆಯೂ ಅವರು ಸೂಚಿಸಿದ್ದರು.
ಕೇಂದ್ರ ಸರ್ಕಾರವು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ವಿಮಾ ಕಂಪೆನಿಗಳು ಅರ್ಹ ರೈತರ ಖಾತೆಗಳಿಗೆ ವಿಮಾ ಮೊತ್ತವನ್ನು ಜಮೆ ಮಾಡುತ್ತವೆ. ಆದರೆ ಮಳೆ ಜಾಸ್ತಿಯಾಗಿರುವ ಕಾರಣ ಹವಾಮಾನ ಆಧಾರಿತ ಬೆಳೆ ನಾಶದ ವರದಿ ಸಲ್ಲಿಕೆಯ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗಿದೆ ಎಂಬುವುದಾಗಿ ಇಲಾಖಾಧಿಕಾರಿಗಳು ಹೇಳಿದ್ದಾರೆ. ಆದರೆ ನವೆಂಬರ್ ಮುಗಿದು ಡಿಸೆಂಬರ್ ತಿಂಗಳು ಆರಂಭಗೊಂಡಿದ್ದರೂ ಇನ್ನೂ ವಿಮಾ ಕಂಪೆನಿಗಳಿಂದ ರೈತರ ಖಾತೆಗಳಿಗೆ ಹಣ ಜಮೆ ಆಗದೆ ಇರುವುದರಿಂದ ಫಲಾನುಭವಿಗಳಿಗೆ ತೀವ್ರ ಆರ್ಥಿಕ ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಅದಷ್ಟು ರೈತರಿಗೆ ಅನುಕೂಲವಾಗುವಂತೆ ವಿಮಾ ಮೊತ್ತ ಬಿಡುಗಡೆ ಮಾಡಲು ಫಾಲೋ ಆಪ್ ಮಾಡಬೇಕು ಎಂದು ಸಭೆಯಲ್ಲಿ ಕ್ಯಾ. ಚೌಟ ನಿರ್ದೇಶನ ನೀಡಿರುವುದಾಗಿದೆ.
























