ವಿದೇಶಗಳಿಂದ ಅಡಿಕೆ ಆಮದು ನಿಯಂತ್ರಿಸಲು ಕ್ಯಾ. ಬ್ರಿಜೇಶ್‌ ಚೌಟ ಆಗ್ರಹ

ಸಂಸತ್‌ ಅಧಿವೇಶನದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಗಮನ ಸೆಳೆದ ಸಂಸದ

ಮಂಗಳೂರು : ಭೂತಾನ್, ಮಯನ್ಮಾರ್ ಮತ್ತು ಶ್ರೀಲಂಕಾದಂತಹ ದೇಶಗಳಿಂದ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಅಡಿಕೆ ಆಮದು ಆಗುತ್ತಿರುವುದರಿಂದ ನಮ್ಮ ಬೆಳೆಗಾರರಿಗೆ ಎದುರಾಗಿರುವ ಗಂಭೀರ ಪರಿಣಾಮಗಳ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಸಂಸತ್‌ ಅಧಿವೇಶನದಲ್ಲಿ ಮಾತನಾಡಿದ್ದಾರೆ.

ಲೋಕಸಭೆಯಲ್ಲಿ ಈ ತುರ್ತು ವಿಚಾರವನ್ನು ಪ್ರಸ್ತಾಪಿಸಿದ ಸಂಸದ ಕ್ಯಾ.ಚೌಟ ಅವರು ನೆರೆಯ ಸಣ್ಣ ದೇಶಗಳಿಂದ ಸುಂಕ ಮುಕ್ತ ಅಡಿಕೆ ಆಮದು ನೀತಿಯಿಂದಾಗಿ ಕರ್ನಾಟಕ ಸೇರಿ ನಮ್ಮ ದೇಶದ ಅಡಿಕೆ ಬೆಳೆಗಾರರಿಗೆ ದೊಡ್ಡಮಟ್ಟದ ಹೊಡೆತ ಬೀಳುತ್ತಿದೆ ಎಂದು ಚಳಿಗಾಲ ಅಧಿವೇಶನದ ಮೊದಲ ದಿನವೇ ಲೋಕಸಭೆಯಲ್ಲಿ ಸದನದ ಗಮನಸೆಳೆದಿದ್ದಾರೆ.





















































 
 

ನೆರೆಯ ಈ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ವ್ಯಾಪಾರ-ವ್ಯವಹಾರಕ್ಕೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಭಾರತ ಸರ್ಕಾರವು ಸುಂಕ ಮುಕ್ತ(ಡಿಎಫ್‌ಕ್ಯೂಎಫ್‌) ವ್ಯವಸ್ಥೆಯಡಿ ಶೂನ್ಯ ಸುಂಕ ವಿಧಿಸುತ್ತಿದೆ. ಆದರೆ ಈ ಸುಂಕಮುಕ್ತ ವ್ಯವಸ್ಥೆಯನ್ನು ಈ ದೇಶಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಅದರಿಂದದಕ್ಷಿಣ ಕನ್ನಡ ಜಿಲ್ಲೆಯೂ ಸೇರಿ ದೇಶದ ಅಡಿಕೆ ಬೆಳೆಗಾರರಿಗೆ ದೊಡ್ಡ ಅಪಾಯವುಂಟು ಮಾಡುತ್ತಿದೆ. ಅಷ್ಟೇ ಅಲ್ಲ, ಈ ಶೂನ್ಯ ಸುಂಕ ವ್ಯವಸ್ಥೆಯಿಂದಾಗಿ ಶ್ರೀಲಂಕಾ, ಭೂತಾನ್‌ನಂಥ ದೇಶಗಳಿಂದ ಕಡಿಮೆ ಬೆಲೆಯ ಕಳಪೆ ಅಡಿಕೆ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಹರಿದುಬರುತ್ತಿದೆ. ಇದು ಸಹಜವಾಗಿಯೇ ನಮ್ಮ ದೇಶದ ಅಡಿಕೆ ದರ ಕುಸಿತವಾಗಿ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ತಳ್ಳುತ್ತಿದೆ. 2023ರ ಸೆಪ್ಟಂಬರ್‌ನಿಂದ 2024ರ ಆಗಸ್ಟ್‌ ವರೆಗಿನ ಅವಧಿಯಲ್ಲಿ ಭೂತಾನ್‌ನಿಂದ ಶೇ.57ರಷ್ಟು, ಮಾಯನ್ಮಾರ್‌ನಿಂದ ಶೇ.39ರಷ್ಟು ಹಾಗೂ ಶ್ರೀಲಂಕಾದಿಂದ ಶೇ.2ರಷ್ಟು ಕಳಪೆ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದು ಕ್ಯಾ. ಚೌಟ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತವು ಅಡಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದು, 2023-24ರ ಅವಧಿಯಲ್ಲಿ ಸುಮಾರು 14 ಲಕ್ಷ ಟನ್‌ ಅಡಿಕೆ ಉತ್ಪಾದಿಸಿದೆ. ಕರ್ನಾಟಕವೊಂದೇ ಸುಮಾರು 10 ಲಕ್ಷ ಟನ್‌ ಅಡಿಕೆ ಉತ್ಪಾದಿಸಿದೆ. ನಮ್ಮ ದೇಶದಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದ ಅಡಿಕೆ ಉತ್ಪಾದನೆಯಾಗುತ್ತಿರುವಾಗ, ನೆರೆಯ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಶೂನ್ಯ ಸುಂಕ ಪಾವತಿ ವ್ಯವಸ್ಥೆಯಡಿ ಆಮದು ಮಾಡುವ ಅಗತ್ಯವಿಲ್ಲ. ಇದರಿಂದ ನಮ್ಮ ಅಡಿಕೆಯ ದರ ಹಾಗೂ ಬೇಡಿಕೆ ಕುಸಿದು ಬೆಳೆಗಾರರು ತೀವ್ರ ಆರ್ಥಿಕ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹೆಚ್ಚು ಅಡಿಕೆ ಬೆಳೆಯುವ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರನ್ನು ತೀವ್ರವಾಗಿ ಬಾಧಿಸಿದೆ ಎಂದು ಕ್ಯಾ. ಚೌಟ ಅವರು ಈ ಗಂಭೀರ ಸಮಸ್ಯೆಯನ್ನು ಸದನದ ಗಮನಕ್ಕೆ ತಂದಿದ್ದಾರೆ.

ಸಾಮಾನ್ಯವಾಗಿ ಹೊರ ದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುವಾಗ ಶೇ.100ರಷ್ಟು ಮೂಲ ಸುಂಕ ವಿಧಿಸಲಾಗುತ್ತದೆ. ಆದರೆ, ಈ ಸುಂಕ ಮುಕ್ತ ವ್ಯವಸ್ಥೆ ನೆರೆದೇಶಗಳಿಂದ ಅಡಿಕೆಯಂಥ ಉತ್ಪನ್ನ ಸುಲಭವಾಗಿ ಭಾರತವನ್ನು ಪ್ರವೇಶಿಸಿ ನಮ್ಮ ರೈತರಿಗೆ ದೊಡ್ಡ ಅಪಾಯವುಂಟು ಮಾಡಿದೆ. ಈ ಸುಂಕಮುಕ್ತ ವಿನಾಯಿತಿಯು ಬೆಲೆ ಕುಸಿತ, ಮಾರುಕಟ್ಟೆ ಅಸ್ಥಿರತೆ ಮತ್ತು ಈ ಅಡಿಕೆ ಬೆಳೆಯನ್ನು ಅವಲಂಬಿಸಿ ಜೀವನೋಪಾಯ ನಡೆಸುತ್ತಿರುವ ಲಕ್ಷಾಂತರ ಕೃಷಿಕರನ್ನು ಆರ್ಥಿಕ ಮುಗ್ಗಟ್ಟಿಗೆ ದೂಡುತ್ತಿದೆ ಎಂದು ಸಂಸದರು ಮನವರಿಕೆ ಮಾಡಿದ್ದಾರೆ.

ಕ್ಯಾ.ಚೌಟ ಅವರು ಅಡಿಕೆ ಅಮದು ತಡೆಯುವ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೂ ಮನವಿ ಸಲ್ಲಿಸಿದ್ದಾರೆ. ಸುಂಕಮುಕ್ತ ಉತ್ಪನ್ನ ಆಮದು ಪಟ್ಟಿಯಿಂದ ಅಡಿಕೆಯನ್ನು ಹೊರಗಿಡಬೇಕು ಹಾಗೂ ಕಡಿಮೆ ಅಭಿವೃದ್ಧಿ ಹೊಂದಿರುವ ದೇಶಗಳಿಂದ ಆಮದಾಗುವ ಉತ್ಪನ್ನಗಳಿಗೆ ಸಾಮಾನ್ಯ ಸುಂಕ ವಿಧಿಸುವ ವ್ಯವಸ್ಥೆ ಮರುಸ್ಥಾಪಿಸಬೇಕು. ಆ ಮೂಲಕ ದಕ್ಷಿಣ ಕನ್ನಡ ಸೇರಿದಂತೆ ಅಡಿಕೆ ಬೆಳೆಯುವ ಭಾಗದ ಲಕ್ಷಾಂತರ ರೈತರ ಹಿತ ಕಾಪಾಡುವಂತೆ ಮನವಿಯಲ್ಲಿ ಸಂಸದರು ಒತ್ತಾಯಿಸಿದ್ದಾರೆ.

error: Content is protected !!
Scroll to Top