ಕೊನೆಯ ಓವರ್ ತನಕ ತುದಿಗಾಲಲ್ಲಿ ನಿಲ್ಲಿಸಿದ ರಾಂಚಿ ಏಕದಿನ
ರಾಂಚಿ: ವಿರಾಟ್ ಕೊಹ್ಲಿ ಶತಕ, ರೋಹಿತ್ ಮತ್ತು ನಾಯಕ ಕೆಎಲ್ ರಾಹುಲ್ ಅವರ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ 17 ರನ್ಗಳಿಂದ ಗೆದ್ದಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹಿರಿಯರಾದ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರ ಬಿರುಸಿನ ಆಟ ಈ ಪಂದ್ಯದ ಹೈಲೈಟ್ ಆಗಿತ್ತು. ಇಬ್ಬರೂ ಈ ಮೂಲಕ ತಮ್ಮ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 349 ರನ್ ಹೊಡೆಯಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 49.2 ಓವರ್ಗಳಲ್ಲಿ 332 ರನ್ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಈ ಏಕದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಐಸಿಸಿಯ ಒಂದು ಮಾದರಿಯ ಕ್ರಿಕೆಟ್ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆಗೆ ಕೊಹ್ಲಿ ಪಾತ್ರವಾಗಿದ್ದಾರೆ. ಇಲ್ಲಿಯವರೆಗೆ ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ನಲ್ಲಿ 51 ಶತಕ ಹೊಡೆದಿದ್ದರು. ಕೊಹ್ಲಿ ಇಂದು 102 ಎಸೆತಗಳಲ್ಲಿ 52ನೇ ಶತಕ ಸಿಡಿಸಿ ಸಚಿನ್ ದಾಖಲೆಯನ್ನು ಮುರಿದರು.
ಆರಂಭದಲ್ಲಿ ಆಫ್ರಿಕಾ ವಿಕೆಟ್ ಕಳೆದುಕೊಂಡಿದ್ದರೂ ಮಧ್ಯಮ ಕ್ರಮಾಂಕ ಮತ್ತು ಕೊನೆಯಲ್ಲಿ ಬ್ಯಾಟರ್ಗಳು ಬ್ಯಾಟ್ ಬೀಸಿದ ಪರಿಣಾಮ ಪಂದ್ಯ ರೋಚಕತೆಯತ್ತ ಸಾಗಿತ್ತು. ಸ್ಲಾಗ್ ಓವರ್ನಲ್ಲಿ ಬೌಲರ್ಗಳು ಉತ್ತಮ ನಿಯಂತ್ರಣ ಸಾಧಿಸಿದ ಪರಿಣಾಮ ಭಾರತ ಪಂದ್ಯವನ್ನು ಕೊನೆಯ ಓವರ್ನಲ್ಲಿ ಗೆದ್ದುಕೊಂಡಿತು.
ಆಫ್ರಿಕಾ 11 ರನ್ ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಹರ್ಷಿತ್ ರಾಣಾ ಅವರ ಮೊದಲ ಓವರ್ನಲ್ಲಿ 2 ವಿಕೆಟ್ ಕಿತ್ತು ದೊಡ್ಡ ಆಘಾತ ನೀಡಿದರು. ಈ ಹಂತದಲ್ಲಿ ಮ್ಯಾಥ್ಯೂ ಬ್ರೀಟ್ಜ್ಕೆ ಮತ್ತು ಟೋನಿ ಡಿ ಜೋರ್ಜಿ ನಿಧಾನವಾಗಿ ಇನ್ನಿಂಗ್ಸ್ ಕಟ್ಟತೊಡಗಿದರು. ಟೋನಿ ಡಿ ಜೋರ್ಜಿ 39 ರನ್ ನಂತರ ಡೆವಾಲ್ಡ್ ಬ್ರೆವಿಸ್ 37 ರನ್(2 ಬೌಂಡರಿ, 3 ಸಿಕ್ಸ್) ಹೊಡೆದು ಔಟಾದರು.
5 ವಿಕೆಟ್ ನಷ್ಟಕ್ಕೆ 130 ರನ್ಗಳಿಸಿ ಒತ್ತಡದಲ್ಲಿದ್ದಾಗ 6.5 ಅಡಿ ಎತ್ತರದ ಜಾನ್ಸೆನ್ ಕ್ರೀಸ್ಗೆ ಆಗಮಿಸಿದರು. ಅವರು ಸಿಕ್ಸರ್, ಬೌಂಡರಿ ಸಿಡಿಸಿದ ಪರಿಣಾಮ 6ನೇ ವಿಕೆಟಿಗೆ ಮ್ಯಾಥ್ಯೂ ಬ್ರೀಟ್ಜ್ಕೆ ಜೊತೆಗೂಡಿ 69 ಎಸೆತಗಳಲ್ಲಿ 97 ರನ್ ಚಚ್ಚಿದರು. ಈ ಮೊತ್ತದಲ್ಲಿ ಜಾನ್ಸೆನ್ 70 ರನ್(39 ಎಸೆತ, 8 ಬೌಂಡರಿ, 3 ಸಿಕ್ಸ್) ಸಿಡಿಸಿ ಹೋರಾಟ ತೋರಿದರು. ಆದರೆ 34ನೇ ಓವರ್ ಎಸೆದ ಕುಲದೀಪ್ ಮ್ಯಾಜಿಕ್ ಮಾಡಿದರು.
ಕುಲದೀಪ್ ಎಸೆದ 34ನೇ ಓವರ್ ಮೊದಲ ಸಿಕ್ಸ್ ಸಿಡಿಸಲು ಹೋಗಿ ಜಾನ್ಸೆನ್, ಜಡೇಜಾಗೆ ಕ್ಯಾಚ್ ನೀಡಿದರೆ ಅದೇ ಓವರ್ನ ಮೂರನೇ ಎಸೆತದಲ್ಲಿ 72 ರನ್(80 ಎಸೆತ, 8 ಬೌಂಡರಿ, 1 ಸಿಕ್ಸ್) ಹೊಡೆದಿದ್ದ ಬ್ರೀಟ್ಜ್ಕೆ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು.
ಕೊನೆಯಲ್ಲಿ ಪ್ರೆನೆಲನ್ ಸುಬ್ರಯೆನ್ 17 ರನ್ ಹೊಡೆದರು. 270 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದಾಗ 9ನೇ ವಿಕೆಟಿಗೆ ಕಾರ್ಬಿನ್ ಬಾಚ್ ಮತ್ತು ಬರ್ಗರ್ 40 ಎಸೆತಗಳಲ್ಲಿ 42 ರನ್ ಜೊತೆಯಾಟವಾಡಿದ್ದರಿಂದ ಆಫ್ರಿಕಾದ ಮೊತ್ತ 300 ರನ್ಗಳ ಗಡಿಯನ್ನು ದಾಟಿತ್ತು. ಕೊನೆಯಲ್ಲಿ ಕಾರ್ಬಿನ್ ಬಾಷ್ ಸ್ಫೋಟಕ ಬ್ಯಾಟ್ ಮಾಡುತ್ತಿದ್ದ ಪರಿಣಾಮ ಕುತೂಹಲ ಹೆಚ್ಚಾಗಿತ್ತು ಆದರೆ 70 ರನ್ ಗಳಿಸಿದ್ದಾಗ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಸಿಕ್ಸ್ ಸಿಡಿಸಲು ಹೋಗಿ ರೋಹಿತ್ಗೆ ಕ್ಯಾಚ್ ನೀಡಿ ಔಟಾದರು.
ಕುಲದೀಪ್ ಯಾದವ್ 4 ವಿಕೆಟ್, ಹರ್ಷಿತ್ ರಾಣಾ 3 ವಿಕೆಟ್, ಆರ್ಷ್ದೀಪ್ ಸಿಂಗ್ 2 ವಿಕೆಟ್, ಪ್ರಸಿದ್ಧ್ ಕೃಷ್ಣಾ 1 ವಿಕೆಟ್ ಪಡೆದರು
ರೋ-ಕೋ ಕಮಾಲ್
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 18 ರನ್ ಗಳಿಸಿ ಔಟಾದ ನಂತರ ರೋಹಿತ್ ಶರ್ಮಾ ಮತ್ತು ಕೊಹ್ಲಿ ಇನ್ನಿಂಗ್ಸ್ ಕಟ್ಟತೊಡಗಿದರು. ಎರಡನೇ ವಿಕೆಟಿಗೆ 109 ಎಸೆತಗಳಲ್ಲಿ 136 ರನ್ ಜೊತೆಯಾಟವಾಡುವ ಮೂಲಕ ಭದ್ರವಾದ ಫೌಂಡೇಶನ್ ಹಾಕಿದರು. ವಿರಾಟ್ ಕೊಹ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಿ ತಮ್ಮ 52ನೇ ಏಕದಿನ ಶತಕವನ್ನು ಪೂರೈಸಿದರು. ರೋಹಿತ್ ಶರ್ಮಾ 57 ರನ್ (51 ಎಸೆತ, 5 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟಾದರು. ನಂತರ ಬಂದ ಋತುರಾಜ್ ಗಾಯಕ್ವಾಡ್ 8 ರನ್, ವಾಷಿಂಗ್ಟನ್ ಸುಂದರ್ 13 ರನ್ ಗಳಿಸಿ ಔಟಾದಾಗ ಭಾರತ ಆತಂಕಕ್ಕೆ ಒಳಗಾಗಿತ್ತು. ಆದರೆ ಕೊಹ್ಲಿ ಮತ್ತು ರಾಹುಲ್ 5ನೇ ವಿಕೆಟಿಗ 74 ಎಸೆತಗಳಲ್ಲಿ 74 ರನ್ ಮತ್ತು 6ನೇ ವಿಕೆಟಿಗೆ ರಾಹುಲ್ ಮತ್ತು ಜಡೇಜಾ 36 ಎಸೆತಗಳಲ್ಲಿ 65 ರನ್ ಜೊತೆಯಾಟವಾಡಿದ್ದರಿಂದ ತಂಡದ ಮೊತ್ತ 300 ರನ್ಗಳ ಗಡಿಯನ್ನು ದಾಟಿತು.
ಕೊಹ್ಲಿ 52ನೇ ಶತಕ ಹೊಡೆದು 135 ರನ್ (120 ಎಸೆತ, 11 ಬೌಂಡರಿ, 7 ಸಿಕ್ಸ್) ಹೊಡೆದು ಔಟಾದರೆ ರಾಹುಲ್ 60 ರನ್(56 ಎಸೆತ, 2 ಬೌಂಡರಿ, 3 ಸಿಕ್ಸ್) ಹೊಡೆದು ವಿಕೆಟ್ ಒಪ್ಪಿಸಿದರು. ಜಡೇಜಾ 32 ರನ್ (20 ಎಸೆತ, 2 ಬೌಂಡರಿ, 1 ಸಿಕ್ಸ್) ಹೊಡೆದರು. ಆಫ್ರಿಕಾ ಪರ ಜಾನ್ಸೆನ್, ಬರ್ಗರ್, ಬಾಷ್, ಬಾರ್ಟ್ಮನ್ ತಲಾ ಎರಡು ವಿಕೆಟ್ ಪಡೆದರು.
























