ರಾಜ್ಯ ರಾಜಕೀಯದಲ್ಲೀಗ ಬ್ರೇಕ್‌ಫಾಸ್ಟ್ ಕುತೂಹಲದ ಕೇಂದ್ರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯಲ್ಲಿ ಬ್ರೇಕ್‌ಫಾಸ್ಟ್ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೀಗ ಮಂಗಳವಾರ ತನ್ನ ಮನೆಗೆ ಸಿದ್ದರಾಮಯ್ಯ ಅವರನ್ನು ಬ್ರೇಕ್‌ಫಾಸ್ಟ್‌ಗೆ ಆಹ್ವಾನಿಸಿದ್ದಾರೆ. ಬ್ರೇಕ್‌ಫಾಸ್ಟ್‌ದ ಮೀಡಿಂಗ್‌ನಲ್ಲಿ ಇಬ್ಬರ ನಡುವಿನ ಕುರ್ಚಿ ಕಿತ್ತಾಟ ಸದ್ಯಕ್ಕೆ ಶಮನಗೊಂಡಿರುವಂತೆ ಕಾಣಿಸುತ್ತಿದ್ದರೂ ನಾಳಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಮತ್ತೊಂದು ಸುತ್ತಿನ ಕುತೂಹಲಕ್ಕೆ ಕಾರಣವಾಗಿದೆ.
ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ತುಸುಮಟ್ಟಿನ ಶಮನ ದೊರೆತಿದ್ದರೂ ದೆಹಲಿ ಮಟ್ಟದಲ್ಲಿ ಮಾತುಕತೆ ಮುಂದುವರಿದಿದೆ. ಶನಿವಾರ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ನಡೆದಿತ್ತು. ಆ ಬಳಿಕ ಸಿಎಂ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಗ್ಗಟ್ಟಿನ ಸಂದೇಶ ರವಾನಿಸಿ, ಏನೇ ಇದ್ದರೂ ಹೈಕಮಾಂಡ್ ಹೇಳಿದಂತೆ ನಡೆಯುತ್ತೇವೆ ಎಂದಿದ್ದರು. ಆ ಬಳಿಕ ಸಿದ್ದರಾಮಯ್ಯ ಅವರು, ಡಿಕೆಶಿ ಕೂಡ ಮನೆಗೆ ಆಹ್ವಾನಿಸಿದ್ದಾರೆ. ಹೋಗುತ್ತೇನೆ ಎಂದಿದ್ದಾರೆ. ಇದೀಗ ಅದಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಮಂಗಳವಾರ ಬೆಳಗ್ಗೆ 9.30ಕ್ಕೆ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರದ ಖಾಸಗಿ ನಿವಾಸದಲ್ಲಿ ಸಿದ್ದರಾಮಯ್ಯ ‘ಬ್ರೇಕ್‌ಫಾಸ್ಟ್ ಮೀಟಿಂಗ್’ಗಾಗಿ ಹಾಜರಾಗಲಿದ್ದಾರೆ.
ಅಧಿಕಾರ ಹಂಚಿಕೆ ತಿಕ್ಕಾಟದ ಅಂತಿಮ ನಿರ್ಧಾರ ಈಗ ಹೈಕಮಾಂಡ್ ಅಂಗಳ ತಲುಪಿದೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಭಾನುವಾರ ಮಹತ್ವದ ಸಭೆ ನಡೆದಿದ್ದು, ಪರಿಹಾರ ಸೂಚಿಸುವಂತೆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಅಧಿಕಾರ ಹಂಚಿಕೆ ಬಿಕ್ಕಟ್ಟು ತುಸು ಮಟ್ಟಿಗೆ ಶಮನಗೊಂಡ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಖರ್ಗೆ ಕರ್ನಾಟಕದವರೇ ಆಗಿರುವುದರಿಂದ ಯಾವುದೇ ಏಕಪಕ್ಷೀಯ ಅಥವಾ ಪಕ್ಷಪಾತ ನಿರ್ಧಾರವಾಗಿ ಹೋಗದಂತೆ ನೋಡಿಕೊಳ್ಳಲು ಎಲ್ಲ ಉನ್ನತ ಮಟ್ಟದ ನಾಯಕರನ್ನು ಜತೆ ಕರೆದು ಚರ್ಚಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆ ಖರ್ಗೆ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ವೇಣುಗೋಪಾಲ್ ಹಾಗೂ ಎಐಸಿಸಿಯ ಇತರ ಹಿರಿಯ ನಾಯಕರು ಹಾಗೂ ಗಾಂಧಿ ಕುಟುಂಬದವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಪಕ್ಷದ ಒಳ ಕಲಹ ತೀವ್ರಗೊಳ್ಳದಂತೆ ಪಾರದರ್ಶಕವಾಗಿ ಎಲ್ಲ ನಾಯಕರಿಂದ ಮುಕ್ತ ಅಭಿಪ್ರಾಯ ಸಂಗ್ರಹ ನಡೆಸುವ ಕಾರ್ಯ ಪ್ರಗತಿಯಲ್ಲಿದೆ.
























