ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವಿರುದ್ಧ ಹೊಸ ಎಫ್‌ಐಆರ್‌ ದಾಖಲು

ನ್ಯಾಷನಲ್‌ ಹೆರಾಲ್ಡ್‌ನ 2 ಸಾವಿರ ಕೋ. ರೂ. ಆಸ್ತಿ ಕಬಳಿಸಿದ ಪ್ರಕರಣ

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ವಿರುದ್ಧ ಹೊಸ ಎಫ್‌ಐಆರ್‌ ದಾಖಲಿಸಲಾಗಿದೆ.

ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ಸದಸ್ಯೆ ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಹೊಸ ಎಫ್‌ಐಆರ್ ದಾಖಲಿಸಿದೆ. ಸೋನಿಯಾ, ರಾಹುಲ್‌ ಜೊತೆಗೆ ಇತರ 6 ವ್ಯಕ್ತಿಗಳು ಹಾಗೂ ಮೂರು ಕಂಪನಿಗಳನ್ನು ಸಹ ಎಫ್‌ಐಆರ್‌ನಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದೆ.





















































 
 

ಎಫ್‌ಐಆರ್ ಉಲ್ಲೇಖಿಸಿರುವ ಪ್ರಕಾರ, ಕಾಂಗ್ರೆಸ್‌ಗೆ ಸಂಬಂಧಿಸಿದ ಕಂಪನಿಯಾದ ಎಜೆಎಲ್ (ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್) ಅನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಳ್ಳಲು ಕ್ರಿಮಿನಲ್ ಪಿತೂರಿ ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯದ (ಇಡಿ) ದೂರಿನ ಆಧಾರದ ಮೇಲೆ ಅಕ್ಟೋಬರ್ 3ರಂದು ಈ ಎಫ್‌ಐಆರ್ ದಾಖಲಿಸಲಾಗಿದೆ. ಇ.ಡಿ ತನ್ನ ತನಿಖಾ ವರದಿಯನ್ನು ದೆಹಲಿ ಪೊಲೀಸರೊಂದಿಗೆ ಹಂಚಿಕೊಂಡಿದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಜೊತೆಗೆ ಎಜೆಎಲ್, ಯಂಗ್ ಇಂಡಿಯನ್ ಮತ್ತು ಡೋಟೆಕ್ಸ್ ಮರ್ಚಂಡೈಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್‌ ಜರ್ನಲ್ಸ್‌ (ಎಲ್‌ಜೆಎಲ್‌)ಗೆ ಸೇರಿದ ಸುಮಾರು 2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಆರೋಪಿಗಳು ಸೇರಿ ತಮ್ಮ ವಶಕ್ಕೆ ಪಡೆದಿದ್ದರು. ಯಂಗ್‌ ಇಂಡಿಯನ್‌ ಸಂಸ್ಥೆಯಲ್ಲಿ ಸೋನಿಯಾ, ರಾಹುಲ್‌ ಗಾಂಧಿ ಶೇ.76ರಷ್ಟು ಷೇರು ಹೊಂದಿದ್ದರು. 90 ಕೋಟಿ ರೂ. ಸಾಲಕ್ಕೆ ಬದಲಾಗಿ ಎಲ್‌ಜೆಎಲ್‌ನ ಆಸ್ತಿಗಳನ್ನು ಇವರು ಕಬಳಿಸಿದ್ದಾರೆ ಎಂದು ಇ.ಡಿ ಆರೋಪ ಪಟ್ಟಿಯಲ್ಲಿ ತಿಳಿಸಿತ್ತು.

ಇ.ಡಿ 2021ರಲ್ಲಿ ತನಿಖೆ ಆರಂಭಿಸಿತ್ತು. ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಜೂನ್ 2014ರಲ್ಲಿ ನೀಡಿದ ಆದೇಶದ ಆಧಾರದ ಮೇಲೆ ತನಿಖೆ ನಡೆಸಿತ್ತು. ಕಳೆದ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿತ್ತು.

error: Content is protected !!
Scroll to Top