ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಒಗ್ಗಟ್ಟಿನ ರಾಗ : ಭಿನ್ನಮತ ಇಲ್ಲ ಎಂದು ಸಾರಿದ ಸಿದ್ದರಾಮಯ್ಯ-ಡಿಕೆಶಿ

ಎರಡೂವರೆ ವರ್ಷದ ಅಧಿಕಾರ ಕಚ್ಚಾಟಕ್ಕೆ ಸದ್ಯ ತೆರೆ

ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದಿಂದ ನಡೆಯುತ್ತಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವಿನ ಅಧಿಕಾರ ಕಚ್ಚಾಟಕ್ಕೆ ಸದ್ಯ ತೆರೆ ಬಿದ್ದಂತೆ ಕಾಣುತ್ತದೆ. ಇಂದು ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಇಬ್ಬರೂ ಒಗ್ಗಟ್ಟಿನ ರಾಗ ಹಾಡಿದ್ದಾರೆ. ನಾವಿಬ್ಬರು ಒಂದಾಗಿದ್ದೇವೆ, ಹೈಕಮಾಂಡ್‌ ಹೇಳಿದಂತೆ ಕೇಳುತ್ತೇವೆ. ಪಕ್ಷವನ್ನ ಇನ್ನಷ್ಟು ಶಕ್ತಿಶಾಲಿಗೊಳಿಸಿ 2028ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ.

ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಕಾವೇರಿ ನಿವಾಸದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮೊದಲಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಡಿ.ಕೆ ಶಿವಕುಮಾರ್‌, ಪೊನ್ನಣ್ಣ ಬ್ರೇಕ್‌ಫಾಸ್ಟ್‌ನಲ್ಲಿ ಭಾಗಿಯಾಗಿದ್ವಿ. ಅಲ್ಲೇನು ಮಾತನಾಡಲಿಲ್ಲ, ‌ಬ್ರೇಕ್‌ಫಾಸ್ಟ್‌ ಮಾತ್ರ ಮಾಡಿದ್ವಿ, ಚೆನ್ನಾಗಿತ್ತು. ಡಿ.ಕೆ ಶಿವಕುಮಾರ್‌ ಇವತ್ತು ನಮ್ಮ ಮನೆಗೆ ಊಟಕ್ಕೆ ಬನ್ನಿ ಅಂತ ಹೇಳಿದರು. ಆದರೆ ಕೆ.ಸಿ ವೇಣುಗೋಪಾಲ್‌ ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಮಾತನಾಡುವಂತೆ ಸೂಚನೆ ಕೊಟ್ಟಿದ್ದರು. ಹಾಗಾಗಿ ಬ್ರೇಕ್‌ಫಾಸ್ಟ್‌ಗೆ ಇಲ್ಲಿಗೆ ಬನ್ನಿ, ಇನ್ನೊಂದು ದಿನ ಊಟಕ್ಕೆ ಬರ್ತೀನಿ ಅಂತ ಹೇಳಿದೆ ಎಂದು ತಿಳಿಸಿದರು.





















































 
 

ಅನಗತ್ಯವಾಗಿ ಕೆಲವು ಗೊಂದಲಗಳು ನಿರ್ಮಾಣ ಆಗಿವೆ. ನಾವಿಬ್ಬರೇ ಕೂತು ಮಾತನಾಡಿದ್ದೇವೆ. 2028ರ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಮಗೆ ಬಹಳ ಮುಖ್ಯ. ಅದರ ಬಗ್ಗೆಯೂ ಚರ್ಚೆ ಮಾತನಾಡಿದ್ದೇವೆ. 2028ರಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದರ ಬಗ್ಗೆ ಚರ್ಚೆ ಮಾಡಿದ್ದೇವೆ. 2023ರಲ್ಲಿ ಹೇಗೆ ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದೆವು ಅದೇ ರೀತಿ ಮುಂದೆನೂ ಒಟ್ಟಿಗೆ ಕೆಲಸ ಮಾಡ್ತೀವಿ. ನನ್ನ – ಡಿಕೆ ನಡುವೆ ಭಿನ್ನಮತ ಇಲ್ಲ. ನಾವು ಒಟ್ಟಾಗಿದ್ದೇವೆ ಎಂದು ಒಗ್ಗಟ್ಟಿನ ಸಂದೇಶ ಸಾರಿದರು.

ಡಿಸೆಂಬರ್‌ 8ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಶುರುವಾಗಲಿದೆ. ಸುಳ್ಳು ಅಪವಾದ ಮಾಡೋದು ಬಿಜೆಪಿ-ಜೆಡಿಎಸ್ ಚಾಳಿ. ಇದನ್ನು ಬಹಳ ಸಮರ್ಥವಾಗಿ ನಾವು ಮತ್ತು ನಮ್ಮ ಸರ್ಕಾರ ಸಮರ್ಥವಾಗಿ ಎದುರಿಸುತ್ತೇವೆ. ಅದಕ್ಕೆ ಬೇಕಾದ ತಂತ್ರಗಳನ್ನೂ ರೂಪಿಸಿದ್ದೇವೆ ಎಂದು ತಿಳಿಸಿದರು.

ನಾವು 142 ಜನ ಇದ್ದೇವೆ. ಅವರು 64 ಜನ ಮಾತ್ರ ಇದ್ದಾರೆ. ಜೆಡಿಎಸ್‌ ಇರೋದು 18 ಜನ ಮಾತ್ರ. ಅವರಿಬ್ಬರು ಸೇರಿ ಏನೇ ಆರೋಪ ಮಾಡಿದರೂ ಅದೆಲ್ಲವನ್ನು ಸಮರ್ಥವಾಗಿ ಎದುರಿಸುತ್ತೇವೆ. ಬಹಳ ಮುಖ್ಯಮಾಗಿ ಹೈಕಮಾಂಡ್‌ನವರು ಹೇಳುವುದನ್ನು ತೀರ್ಮಾನ ಮಾಡಿದ್ದೇವೆ. ಕೇಂದ್ರದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದ ಹೈಕಮಾಂಡ್‌ ಇಲ್ಲಿನ ಗೊಂದಲಗಳನ್ನು ನಮಗೇ ಬಗೆಹರಿಸಲು ಹೇಳಿದ್ದಾರೆ. ನಾಳೆಯಿಂದ ಯಾವುದೇ ಗೊಂದಲ ಇರಲ್ಲ ಎಂದು ಕುರ್ಚಿ ಕದನಕ್ಕೆ ತೆರೆ ಎಳೆದರು.

error: Content is protected !!
Scroll to Top