ಡಾಕ್ಟರ್ ಆಗುವ ಕನಸು ನನಸಾಯಿತು ಎಂದು ಖುಷಿಪಟ್ಟ ಖಾದರ್
ಬೆಂಗಳೂರು: ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ರವರು ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾರೆ. ರಾಜಭವನದ ಬ್ಯಾಂಕ್ವೇಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಪದವಿ ಪ್ರದಾನ ಮಾಡಲಾಯಿತು.
ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಖಾದರ್, ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸ್ವೀಕರಿಸಿರುವುದು ಸಾಕಷ್ಟು ಹೆಮ್ಮೆ ಮತ್ತು ಸಂತಸದ ವಿಷಯವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯಿಂದ ಗೌರವದ ಜೊತೆಗೆ ಜವಾಬ್ದಾರಿ ಕೂಡ ಹೆಚ್ಚಾಗಿದೆ. ಭವಿಷ್ಯದಲ್ಲೂ ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯವನ್ನು, ವಿಶ್ವಾಸವನ್ನು ಎತ್ತಿ ಹಿಡಿಯುವ ದಾರಿಯಲ್ಲಿ ಸಾಗುತ್ತೇನೆ ಎಂದು ಹೇಳಿದರು.
ಕಾಲೇಜು ದಿನಗಳಲ್ಲಿ ಡಾಕ್ಟರ್ ಆಗಬೇಕೆಂಬ ಕನಸಿತ್ತು. ಆದರೆ ವಿಜ್ಞಾನ ವಿಷಯದಲ್ಲಿ ಅಂಕ ಕಡಿಮೆ ಬರುತ್ತಿತ್ತು. ಹಾಗಾಗಿ ಇದು ಆಗದ ಕೆಲಸ ಎಂದು ಡಾಕ್ಟರ್ ಕನಸು ಬಿಟ್ಟು ಕಾನೂನು ವಿಷಯಕ್ಕೆ ಸೇರಿದೆ, ಆದರೆ ಮುಂದೆ ಆರೋಗ್ಯ ಸಚಿವನಾಗಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಿತು. ಡಾಕ್ಟರ್ ಆಗದಿದ್ದರೂ ಇಂದು ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಡಾಕ್ಟರೇಟ್ ಲಭಿಸಿರುವುದು ಸಾಕಷ್ಟು ಖುಷಿಯ ವಿಷಯ. ಈ ಪ್ರೀತಿ, ಸಹಕಾರ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
























