ಇದು ಭಯೋತ್ಪಾದನಾ ಕೃತ್ಯ ಎಂದು ಘೋಷಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸವಾದ ಶ್ವೇತಭವನದ ಬಳಿಯೇ ಇಬ್ಬರು ಸೈನಿಕರ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದು, ಅಮೆರಿಕಾದ್ಯಂತ ಕಳವಳಕ್ಕೆ ಕಾರಣವಾಗಿದೆ. ಇಬ್ಬರು ರಾಷ್ಟ್ರೀಯ ಗಾರ್ಡ್ ಸದಸ್ಯರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ದಾಳಿ ನಡೆಸಿದಾತ ಅಫಘಾನಿಸ್ಥಾನ ಮೂಲದ ಭಯೋತ್ಪಾದಕ ಎನ್ನಲಾಗಿದೆ. ಗಾಯಗೊಂಡ ಇಬ್ಬರು ಸೈನಿಕರನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಭಯೋತ್ಪಾದನಾ ಕೃತ್ಯ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ.
ಫ್ಲೋರಿಡಾದಲ್ಲಿ ಮಾತನಾಡಿದ ಅವರು, ದಾಳಿಯನ್ನು ಘೋರ, ದುಷ್ಟ ಮತ್ತು ದ್ವೇಷದ ಕೃತ್ಯ ಎಂದು ಕರೆದಿದ್ದಾರೆ. ಅಪರಾಧಿಯು ತುಂಬಾ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಶ್ವೇತಭವನದ ವಾಯವ್ಯಕ್ಕೆ ಸರಿಸುಮಾರು ಎರಡು ಬ್ಲಾಕ್‌ಗಳ ದೂರದಲ್ಲಿ ಈ ದಾಳಿ ಸಂಭವಿಸಿದೆ. ಅಲ್ಲಿ ಇಬ್ಬರು ಪಶ್ಚಿಮ ವರ್ಜೀನಿಯಾ ರಾಷ್ಟ್ರೀಯ ಗಾರ್ಡ್ ಸದಸ್ಯರನ್ನು ಮೆಟ್ರೋ ನಿಲ್ದಾಣದ ಬಳಿ ಹೊಂಚು ಹಾಕಿ ದಾಳಿ ಮಾಡಲಾಗಿದೆ. ಇಬ್ಬರನ್ನೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಮತ್ತು ವಾಷಿಂಗ್ಟನ್ ಮೇಯರ್ ಮುರಿಯಲ್ ಬೌಸರ್ ಹೇಳಿದ್ದಾರೆ.
ಅಧಿಕಾರಿಗಳು ಶಂಕಿತನನ್ನು ಆಫ್ಘಾನಿಸ್ತಾನ ಪ್ರಜೆ ರಹಮಾನಲ್ಲಾ ಲಕನ್ವಾಲ್ ಎಂದು ಗುರುತಿಸಿದ್ದಾರೆ, ಈತ ಸೆಪ್ಟೆಂಬರ್ 2021ರಲ್ಲಿ ಯುಎಸ್ ಪ್ರವೇಶಿಸಿದ್ದನು. ತನಿಖಾಧಿಕಾರಿಗಳು ಇನ್ನೂ ಆತನ ಹಿನ್ನೆಲೆ ಮತ್ತು ಉದ್ದೇಶದ ವಿವರಗಳನ್ನು ದೃಢಪಡಿಸುತ್ತಿದ್ದಾರೆ. ಶಂಕಿತ ವ್ಯಕ್ತಿ ಅಫ್ಘಾನಿಸ್ತಾನದಿಂದ ಅಮೆರಿಕ ಪ್ರವೇಶಿಸಿದ್ದಾನೆ ಎಂದು ಗೃಹ ಭದ್ರತಾ ಇಲಾಖೆಗೆ ಗೊತ್ತಾಗಿದೆ. ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಬಂಧನದಲ್ಲಿರುವ ಶಂಕಿತ ವ್ಯಕ್ತಿ ಈ ಭೂಮಿ ಮೇಲಿನ ಅತ್ಯಂತ ನರಕ ದೇಶ ಆಫ್ಘಾನಿಸ್ತಾನದಿಂದ ನಮ್ಮ ದೇಶಕ್ಕೆ ಬಂದಿದ್ದಾನೆ ಎಂದು ಟ್ರಂಪ್ ಹೇಳಿದರು.
























