ಶಿವಮೊಗ್ಗ: ವರದಕ್ಷಿಣೆ ಕಿರುಕುಳ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಮಹಿಳೆಯೊಬ್ಬರು ಭದ್ರಾ ಬಲದಂಡೆ ನಾಲೆಗೆ ಹಾರಿದ ಘಟನೆ ನಡೆದಿದೆ.
ಗಂಡ ಮತ್ತು ಆತನ ಮನೆಯವರಿಂದ ವರದಕ್ಷಿಣೆ ಕಿರುಕುಳ ಎದುರಿಸುತ್ತಿದ್ದ ಮಹಿಳೆ ನಾಲೆಗೆ ಹಾರಿರುವುದಾಗಿದೆ. ಘಟನೆ ನಡೆದು ಮೂರು ದಿನಗಳಾಗಿದ್ದರೂ ನಾಲೆಗೆ ಹಾರಿದ ಮಹಿಳೆ ಪತ್ತೆಯಾಗಿಲ್ಲ.
ನಾಲೆಗೆ ಹಾರಿದ ಮಹಿಳೆಯನ್ನು ಲತಾ ಎಂದು ಗುರುತಿಸಲಾಗಿದೆ. ಈ ವಿಷಯ ತಿಳಿದು ಪತಿ ಗುರುರಾಜ್ ತನ್ನ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದಾನೆ.
ಗುರುರಾಜ್ ಸರ್ಕಾರಿ ಕೆಲಸದಲ್ಲಿದ್ದ. ಆತನಿಗೆ ಮದುವೆಯ ಸಮಯದಲ್ಲಿ ಭರ್ಜರಿ ವರದಕ್ಷಿಣೆ ಸಹ ನೀಡಲಾಗಿತ್ತು. 30 ಗ್ರಾಂ ಚಿನ್ನ, 10 ಲಕ್ಷ ನಗದು ಸೇರಿ ಒಟ್ಟು 60 ಲಕ್ಷ ರೂ. ಗಳನ್ನು ಖರ್ಚು ಮಾಡಿ ಮದುವೆ ಮಾಡಲಾಗಿತ್ತು. ಮದುವೆಯಾದ ಒಂದೇ ತಿಂಗಳಿಗೆ ಪತಿ ಮತ್ತು ಆತನ ಕುಟುಂಬ ವರ್ಗ ವರದಕ್ಷಿಣೆಗಾಗಿ ಕಿರುಕುಳ ನೀಡಲು ಆರಂಭ ಮಾಡಿರುವುದಾಗಿದೆ. ಗುರುರಾಜ್ ಪತ್ನಿಯ ಮುಂದೆಯೇ ಅಕ್ಕನ ಮಗಳ ಜೊತೆಗೆ ಸಲಿಗೆಯಿಂದ ನಡೆದುಕೊಳ್ಳುತ್ತಿದ್ದ. ಹಾಗೆಯೇ ಇನ್ನೊಂದು ಯುವತಿಯ ಜೊತೆಗೂ ಚಾಟಿಂಗ್ ನಡೆಸುತ್ತಿದ್ದ. ಲತಾ ಡೆತ್ ನೋಟ್‌ನಲ್ಲಿ ಈ ಎಲ್ಲಾ ವಿಷಯವನ್ನೂ ಉಲ್ಲೇಖ ಮಾಡಿದ್ದಾರೆ.
ಆಷಾಢ ಮಾಸದಲ್ಲಿ ಲತಾ ತವರು ಮನೆಗೆ ಬಂದಿದ್ದು, ಆಕೆಯನ್ನು ಮತ್ತೆ ಗಂಡನ ಮನೆಗೂ ಕರೆದುಕೊಂಡು ಹೋಗಿಲ್ಲ. ಇವೆಲ್ಲದರಿಂದಲೂ ಮಾನಸಿಕವಾಗಿ ಲತಾ ನೊಂದಿದ್ದರು.
ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಪತಿಯ ಅಕ್ಕಂದಿರಾದ ನಾಗರತ್ನಾ, ರಾಜೇಶ್ವರಿ, ಅತ್ತೆ ಶಾರದಮ್ಮ, ಪತಿಯ ಅಕ್ಕನ ಗಂಡ ಕೃಷ್ಣಪ್ಪ ಹಾಗೂ ಪತಿ ಗುರುರಾಜ್ ಕಾರಣ ಎಂದು ಆರೋಪಿಸಿದ್ದಾರೆ.
ನವೆಂಬರ್ 23ರಂದು ಭದ್ರಾವತಿಯ ತಾಲೂಕಿನ ಹಂಚಿನ ಸಿದ್ದಾಪುರ ಗ್ರಾಮದ ಬಳಿ ಇರುವ ಭದ್ರಾ ಬಲದಂಡೆ ನಾಲೆಗೆ ಹಾರಿದ್ದಾರೆ. ಸಾಯುವ ಮೊದಲು ನಾಲೆಯ ಬಳಿ ಇರುವ ದೇಗುಲ ಬಳಿ ಬಳೆ ಹಾಗೂ ಮೊಬೈಲ್ ಇಟ್ಟು ಹೊಗಿದ್ದಾರೆ. ಮಗಳ ನಿರ್ಧಾರದಿಂದ ಪೋಷಕರು ಕಂಗಾಲಾಗಿದ್ದು, ನಾಲೆ ಬಳಿ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
























