ಭೀಕರ ಅಪಘಾತದಲ್ಲಿ ಮೂವರು ಸಾವು
ಬೆಂಗಳೂರು: ಕಲಬುರಗಿಯ ಜೇವರ್ಗಿ ಸಮೀಪ ನಿನ್ನೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಹಿತ ಮೂವರು ಸಾವನ್ನಪ್ಪಿದ್ದಾರೆ. ಮಾರ್ಗ ಮಧ್ಯೆ ಶ್ವಾನ ಅಡ್ಡಬಂದ ಹಿನ್ನೆಲೆ ಅದನ್ನು ತಪ್ಪಿಸಲು ಹೋಗಿ ಜೇವರ್ಗಿ ಬೈಪಾಸ್‌ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಹಾಂತೇಶ್ ಬೀಳಗಿ ಅವರ ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಮೃತರು. ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ.

1974ರ ಮಾರ್ಚ್ 27ರಂದು ಜನಿಸಿದ್ದ ಮಹಾಂತೇಶ್ ಬೀಳಗಿ ಅವರು 2012ರ ಕರ್ನಾಟಕ ಕೇಡರ್ನ IAS ಅಧಿಕಾರಿಯಾಗಿದ್ದು, ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮಹಾಂತೇಶ್ ಬೀಳಗಿ ಅವರು ಬೆಸ್ಕಾಂ ಎಂಡಿ ಸಹ ಆಗಿದ್ದರು. ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು. ದಕ್ಷ ಅಧಿಕಾರಿಯಾಗಿದ್ದ ಬೀಳಗಿಯವರ ಸಾವಿಗೆ ಜನಸಾಮಾನ್ಯರೂ ಕಣ್ಣೀರುಗರೆದಿದ್ದಾರೆ. ಐಎಎಸ್ ಅಧಿಕಾರಿಯ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶೆರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಏಕಾಏಕಿ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ KA 04, NC 7982 ಸಂಖ್ಯೆಯ ಇನ್ನೋವಾ ಕಾರು ಪಲ್ಟಿಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮಹಾಂತೇಶ ಬೀಳಗಿ ಪಾರ್ಥೀವ ಶರೀರವನ್ನು ಮಣ್ಣೂರ ಖಾಸಗಿ ಆಸ್ಪತ್ರೆಯಿಂದ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಇಂದು ಅವರ ಅಂತ್ಯಕ್ರಿಯೆ ನೆರವೇರಲಿದೆ.
ಸಹೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಹಾಂತೇಶ್ ಬೀಳಗಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಐಜಿಪಿ ಶಾಂತನು ಸಿನ್ಹಾ, ಕಲಬುರಗಿ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳ ದೌಡಾಯಿಸಿದ್ದಾರೆ.
























