ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದ ಕೋರ್ಟ್
ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಆರೋಪ ಪ್ರಕರಣ ಸಂಬಂಧ ಬುರುಡೆ ಗ್ಯಾಂಗಿನ ಮಾಸ್ಕ್ಮ್ಯಾನ್ ಚಿನ್ನಯ್ಯನಿಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ರೂ. ಬಾಂಡ್ ಒದಗಿಸುವುದು ಸೇರಿ 12 ಷರತ್ತುಗಳನ್ನ ನ್ಯಾಯಾಲಯ ವಿಧಿಸಿದೆ. ಪ್ರಕರಣದಲ್ಲಿ ಅಗಸ್ಟ್ 23ರಂದು ಸುಧೀರ್ಘ ವಿಚಾರಣೆ ಬಳಿಕ ದೂರುದಾರ ಚಿನ್ನಯ್ಯನ ಬಂಧನವಾಗಿತ್ತು. ಸುಮಾರು ಮೂರು ತಿಂಗಳಿಂದ ಚಿನ್ನಯ್ಯ ಶಿವಮೊಗ್ಗದ ಜೈಲಿನಲ್ಲಿದ್ದಾನೆ.
ಮುಂದೆ ಇದೇ ರೀತಿಯ ಅಪರಾಧಕ್ಕೆ ಕೈ ಹಾಕಬಾರದು, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಓಡಿಹೋಗುವುದು, ಸ್ಥಳ ಬಿಟ್ಟು ಮರೆಮಾಡಿಕೊಳ್ಳುವುದು ಬೇಡ
ಸಾಕ್ಷಿದಾರರ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರುವ ಕೆಲಸ ಮಾಡಬಾರದು, ಕೇಸಿಗೆ ಸಂಬಂಧಿಸಿದ ದಾಖಲೆ ಅಥವಾ ಪುರಾವೆಗಳನ್ನು ಅಳಿಸುವುದು / ನಾಶಗೊಳಿಸುವುದು ಮಾಡಬಾರದು, ತನಿಖಾಧಿಕಾರಿ ಕರೆ ಮಾಡಿದಾಗ ಹಾಜರಾಗಬೇಕು, ತನಿಖೆಗೆ ತೊಂದರೆ ಕೊಡಬಾರದು, ಕೋರ್ಟ್ ದಿನಾಂಕಗಳಿಗೆ ತಪ್ಪದೆ ಹಾಜರಾಗಬೇಕು, ಕೋರ್ಟ್ ಮನ್ನಿಸಿದಾಗ ಮಾತ್ರ ಹಾಜರಾಗದೆ ಇರಬಹುದು, ಚಿನ್ನಯ್ಯ ಹಾಗೂ ಜಾಮೀನಾದರೂ ಕೂಡ ಆಧಾರ್, ಮತದಾರರ ಗುರುತಿನ ಚೀಟಿಯ ಪುರಾವೆ ಕೊಡಬೇಕು, ವಿಳಾಸದಲ್ಲಿ ಬದಲಾವಣೆ ಆದರೆ ಕೋರ್ಟ್ಗೆ ತಿಳಿಸಬೇಕು, ಮೊಬೈಲ್ ನಂಬರ್ / ವಾಟ್ಸ್ಯಾಪ್ / ಇಮೇಲ್ ಮಾಹಿತಿ ಕೊಡಬೇಕು, ಕೋರ್ಟ್ ವ್ಯಾಪ್ತಿಯಿಂದ ಹೊರಗೆ ಹೋಗಬಾರದು, ಕೇಸ್ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಬಾರದು, ಬೇಲ್ ಮೇಲೆ ಬಿಡುಗಡೆ ಆದ ನಂತರ ಬದಲಿ ದಿನಗಳಲ್ಲಿ (ದಿನ ಬಿಟ್ಟು ದಿನ) ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂಬಿತ್ಯಾದಿ ಕಠಿಣ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಶವ ಹೂತಿಟ್ಟ ಆರೋಪ ಪ್ರಕರಣ ಸಂಬಂಧ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್ಐಟಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದ ತಂಡ 7 ಫೈಲ್ಗಳುಳ್ಳ 3,932 ಪುಟಗಳ ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿಯನ್ನ ಕೋರ್ಟ್ಗೆ ಸಲ್ಲಿಸಿದೆ. ಆರಂಭದಲ್ಲಿ ಚಿನ್ನಯ್ಯನ ಹೇಳಿಕೆ, ಮಹಜರು, 17ಕ್ಕೂ ಹೆಚ್ಚು ಜಾಗದಲ್ಲಿ ನಡೆದಿದ್ದ ಸಮಾಧಿ ಶೋಧ, ಆತನ ಸಂಪರ್ಕದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್, ವಿಠಲ್ ಗೌಡ ಸೇರಿ ಎಲ್ಲರ ಹೇಳಿಕೆಗಳನ್ನ ವರದಿಯಲ್ಲಿ ಉಲ್ಲೇಖಿಸಿದೆ. ಕೆಲ ಆರೋಪಿಗಳ ವಿಚಾರಣೆ ಇನ್ನು ಬಾಕಿ ಇದೆ. ಜೊತೆಗೆ ಲ್ಯಾಬ್ ರಿಪೋರ್ಟ್ ಕೂಡ ಇನ್ನು ಬಂದಿಲ್ಲ. ಆದ್ದರಿಂದ ತನಿಖೆ ಮುಂದುವರೆಸಲು ಇನ್ನು ಕಾಲಾವಕಾಶ ಬೇಕು ಅಂತಾ ಕೇಳಿದ್ದು, ಸಂಪೂರ್ಣ ತನಿಖೆ ಬಳಿಕ ಪೂರ್ಣ ಪ್ರಮಾಣದ ಚಾರ್ಜ್ ಶೀಟ್ ಸಲ್ಲಿಸುತ್ತೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.
























