ಮೇಳಗಳ ತಿರುಗಾಟ ಆರಂಭವಾಗುವಾಗಲೇ ಮಳೆ ಕಾಟ
ಮಂಗಳೂರು : ಶನಿವಾರ ರಾತ್ರಿ ದಕ್ಷಿಣ ಕನ್ನಡ ಜಿಲೆಯ ಬಹುತೇಕ ಕಡೆಗಳಲ್ಲಿ ಸಿಡಿಲು, ಮಿಂಚಿನೊಂದಿಗೆ ಭಾರಿ ಮಳೆ ಸುರಿದಿದ್ದು, ಸಿಡಿಲು ಬಡಿದು ಹಲವೆಡೆ ಹಾನಿ ಸಂಭವಿಸಿದೆ. ಕರಾವಳಿಯಲ್ಲಿ ಯಕ್ಷಗಾನ ಮೇಳಗಳು ಒಂದೊಂದಾಗಿ ತಿರುಗಾಟ ಪ್ರಾರಂಭಿಸುವ ಸಮಯದಲ್ಲೇ ಅಕಾಲಿಕವಾಗಿ ಮಳೆ ಸುರಿಯುತ್ತಿರುವುದು ಮೇಳಗಳಿಗೆ ಮತ್ತು ಯಕ್ಷಗಾನ ಅಭಿಮಾನಿಗಳಿಗೆ ಆತಂತ ತಂದೊಡ್ಡಿದೆ. ಇದಲ್ಲದೆ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಮತ್ತಿತರ ಧಾರ್ಮಿಕ ಕಾರ್ಯಗಳೂ ಪ್ರಾರಂಭವಾಗಿವೆ. ಇವುಗಳಿಗೆಲ್ಲ ಮಳೆ ಅಡ್ಡಿಯಾಗುತ್ತಿದೆ.
ಮೂರು ದಿನಗಳಿಂದ ಅಲ್ಲಲ್ಲಿ ತುಂತುರು ಸುರಿಯುತ್ತಿದ್ದ ಮಳೆ ಶನಿವಾರ ರಾತ್ರಿ ಮುಂಗಾರು ಮಾದರಿಯಲ್ಲೇ ಸುರಿದಿದೆ. ಶನಿವಾರ ಮುಸ್ಸಂಜೆಯಿಂದಲೇ ಅಲ್ಲಲ್ಲಿ ಮಳೆ ಆರಂಭಗೊಂಡು ರಾತ್ರಿ ವೇಳೆ ಜಿಲ್ಲೆಯ ಬಹುತೇಕ ಕಡೆ ವ್ಯಾಪಕ ವರ್ಷಧಾರೆಯಾಗಿದೆ. ಮಂಗಳೂರು, ಸುಳ್ಯ, ಕಡಬ, ಪುತ್ತೂರು, ವಿಟ್ಲ, ಉಪ್ಪಿನಂಗಡಿ, ನೆಲ್ಯಾಡಿ, ಪಂಜ, ಸುಬ್ರಹ್ಮಣ್ಯ, ಉಜಿರೆ, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ಹಲವೆಡೆ ಭರ್ಜರಿ ಮಳೆಯಾಗಿದೆ.
ಹಠಾತ್ ಸುರಿದ ಮಳೆಯಿಂದ ದ್ವಿಚಕ್ರ ವಾಹನ ಸವಾರರು ಒದ್ದೆಯಾಗಿಯೇ ಮನೆಯತ್ತ ತೆರಳಿದರು. ಇನ್ನು ಕೆಲವರು ಬಸ್ ತಂಗುದಾಣದಲ್ಲಿ, ಇತರ ಕಟ್ಟಡಗಳ ಅಡಿಯಲ್ಲಿ ಆಶ್ರಯ ಪಡೆದುಕೊಂಡರು. ಏಕಾಏಕಿ ಸುರಿದ ಮಳೆಯಿಂದ ಗ್ರಾಮೀಣ ಭಾಗದ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಕೆ, ಭತ್ತ, ಬೈಹುಲ್ಲು ಒದ್ದೆಯಾಗಿ ಕೃಷಿ ಫಸಲಿಗೆ ಹಾನಿಯಾಗಿದೆ.
ದೀಪೋತ್ಸವದ ಆರಂಭದ ದಿನಗಳಲ್ಲಿ ಕಾಣಿಸಿಕೊಂಡಿದ್ದ ಚುಮುಚುಮು ಚಳಿ ಹಠಾತ್ ಕಣ್ಮರೆಯಾಗಿದ್ದು ಮೋಡದ ವಾತಾವರಣ ಕಾಣಿಸಿಕೊಂಡಿತ್ತು. ಜತೆಗೆ ಹಗಲಿನಲ್ಲಿ ವಿಪರೀತ ಸೆಖೆಯೂ ಇತ್ತು. ಮುಂದಿನ ವಾರ ಜಿಲ್ಲೆಯ ಎಲ್ಲ ಸುಬ್ರಹ್ಮಣ್ಯ ದೇಗುಲಗಳಲ್ಲಿ ಷಷ್ಠಿ ಜಾತ್ರೋತ್ಸವ ನಡೆಯಲಿದ್ದು, ಮಳೆ ಷಷ್ಠಿ ವರೆಗೂ ಮುಂದುವರಿಯುವ ಸಾಧ್ಯತೆ ಇದೆ.
ಕರಾವಳಿ ಭಾಗದಲ್ಲಿ ಶನಿವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಇದರಿಂದ ಹವಾಮಾನ ವೈಪರೀತ್ಯಗೊಂಡು 3 ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಾಗದೆ ಬೆಂಗಳೂರು, ಚೆನ್ನೈಗೆ ತೆರಳಿವೆ. ಮುಂಬಯಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಿಮಾನ ಬೆಂಗಳೂರಿಗೆ, ಬೆಂಗಳೂರಿನಿಂದ ಆಗಮಿಸಿದ ವಿಮಾನ ಮರಳಿ ಬೆಂಗಳೂರಿಗೆ, ದುಬಾಯಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಿಮಾನ ಚೆನ್ನೈನತ್ತ ತೆರಳಿ ಲ್ಯಾಂಡ್ ಆಗಿದೆ.
ಭಾರಿ ಗುಡುಗು ಸಹಿತ ಮಳೆಯಿಂದ ಹವಾಮಾನ ವ್ಯತ್ಯಯ ಉಂಟಾಗಿ ವಿಮಾನ ಇಳಿಯಲಾಗದೆ ವಿಮಾನ ನಿಲ್ದಾಣದ ಅಧಿಕಾರಿಗಳ ಸೂಚನೆಯಂತೆ ಬೆಂಗಳೂರು, ಚೆನ್ನೈಗೆ ತೆರಳಿತು.
























