ಜೂಜಿನ ಚಟದಿಂದ ಮೈತುಂಬ ಸಾಲ ಮಾಡಿಕೊಂಡಿದ್ದ ಪಾತಕಿಗಳು
ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ಆರ್ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದು ಎಟಿಎಂಗೆ ಹಣ ತುಂಬಲು ಹೋಗುತ್ತಿದ್ದ ವಾಹನ ತಡೆದು ಬೆದರಿಸಿ 7.11 ಕೋಟಿ ದರೋಡೆ ಮಾಡಿದ್ದು ಮೈತುಂಬ ಮಾಡಿಕೊಂಡಿದ್ದ ಸಾಲ ತೀರಿಸಲು ಎಂಬುದಾಗಿ ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ದರೋಡೆಕೋರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸಿಎಂಎಸ್ ಸಂಸ್ಥೆ ಮಾಜಿ ನೌಕರ ಜೇವಿಯರ್ ಎಂಬಾತ ದರೋಡೆಯ ಮಾಸ್ಟರ್ಮೈಂಡ್. ಗೋವಿಂದಪುರ ಪೊಲೀಸ್ ಠಾಣಾ ಕಾನ್ಸ್ಟೆಬಲ್ ಅಣ್ಣಪ್ಪನಾಯ್ಕ್, ಸಿಎಂಎಸ್ ಸಂಸ್ಥೆ ಸಿಬ್ಬಂದಿ ಗೋಪಿ, ರವಿ, ಜಿತೇಶ್ ಸೇರಿ ಒಟ್ಟು ಏಳು ದರೋಡೆಕೋರರನ್ನು ಬಂಧಿಸಿ ದರೋಡೆ ಮಾಡಿದ 6.29 ಕೋಟಿ ಹಣ ರಿಕವರಿ ಮಾಡಲಾಗಿದೆ.
ದರೋಡೆಯ ಮಾಸ್ಟರ್ಮೈಂಡ್ ಜೇವಿಯರ್ ಸೇರಿ ಗ್ಯಾಂಗ್ನಲ್ಲಿದ್ದ ಬಹುತೇಕರಿಗೆ ಮೈತುಂಬಾ ಸಾಲ ಇತ್ತು. ಇಸ್ಪೀಟು ಚಟಕ್ಕೆ ಬಿದ್ದು ಸಾಲ ಮಾಡಿಕೊಂಡಿದ್ದರು. ಎಸಿಎಂ ಕಂಪನಿ ಕೊಡುವ 17,000 ರೂ. ಸಂಬಳದಲ್ಲಿ ಸಾಯುವತನಕ ಸಾಲ ತೀರಿಸುವುದಕ್ಕೆ ಆಗುವುದಿಲ್ಲ ಎಂದು ದೊಡ್ಡ ದರೋಡೆಗೆ ಗ್ಯಾಂಗ್ ಕೈಹಾಕಿದ್ದರು.
ದರೋಡೆ ಮಾಡಿ ಬಂದ ಹಣದಲ್ಲಿ ಮಾಡಿರುವ ಸಾಲ ತೀರಿಸಿ ಮಿಕ್ಕ ಹಣದಲ್ಲಿ ವಿಲಾಸಿ ಜೀವನ ನಡೆಸಬಹುದೆಂದು ಆರೋಪಿಗಳು ದೊಡ್ಡ ದರೋಡೆಗೆ ಮಾಡಿದ್ದರೆಂಬ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಿದೆ.
























