ಪುತ್ತೂರು: ಇಡ್ಕಿದು ನಿವಾಸಿ ಹರೀಶ್ ಎಂಬವರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದು, ಈ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿ ಮೃತರ ಪುತ್ರಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ತಮ್ಮ ಮನೆಯ ಶೌಚಾಲಯಕ್ಕೆ ಹೋಗಿ ಹೊರಬಂದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿದೆ. ಕುಸಿದು ಬಿದ್ದ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅದಾಗಲೇ ಅವರು ಮೃಪಟ್ಟಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಸಂಜೆಯ ವೇಳೆ ಈ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿ ಪುತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತ ಹರೀಶ್ (55) ಅವರು ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ವಾಹನ ಪೈಂಟಿಂಗ್ ಗ್ಯಾರೇಜ್ ನಡೆಸುತ್ತಿದ್ದರು. ಅವರ ಅಂಗಡಿಯ ಪಕ್ಕದ ಗ್ಯಾರೇಜಿನವ ಹರೀಶ್ ಅವರ ಮೇಲೆ ಹಲ್ಲೆ ನಡೆಸಿದ್ದ. ಹಾಗೆಯೇ ಅವರಿಗೆ ಮಾನಸಿಕ ಕಿರುಕುಳ ನೀಡಿದ್ದರು. ಈ ಘಟನೆಯ ಕಾರಣದಿಂದಲೇ ಅವರು ಸಾವನ್ನಪ್ಪಿರುವ ಸಂದೇಹ ಇದೆ ಎಂದು ಅವರ ಪುತ್ರಿ ದೂರಿನಲ್ಲಿ ತಿಳಿಸಿದ್ದಾರೆ.
























