ಪುತ್ತೂರು: ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯದಿಂದ ನಿಧನರಾದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಶ್ರೀಧರ ನಾಯ್ಕ್ ಅವರಿಗೆ ಕಾಲೇಜಿನಲ್ಲಿ ನುಡಿ ನಮನ ಸಲ್ಲಿಸಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ದ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಯಿತು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಇತಿಹಾಸದ ಕುರಿತು ಶ್ರೀಧರ ನಾಯ್ಕ್ ಅವರು ಅಪಾರ ಜ್ಞಾನ ಹೊಂದಿದ್ದರು. ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಆಸೆ ಹೊಂದಿದ್ದವರು. ಎಲ್ಲರೊಳಗೆ ಒಂದು ಎಂಬ ಭಾವನೆ ಹೊಂದಿದ್ದವರು. ಯಾರಲ್ಲಿಯೂ ಬೇಧ ತೋರುತ್ತಿರಲಿಲ್ಲ. ಯಾವ ಕೆಲಸವೇ ಇರಲಿ ಆಗುವುದಿಲ್ಲ ಎನ್ನುವ ಮಾತೇ ಅವರಲ್ಲಿರಲಿಲ್ಲ ಎಂದು ಹೇಳಿದರು.
ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಡಾ. ಶ್ರೀಧರ ನಾಯ್ಕ ಇತಿಹಾಸದ ಬಗೆಗೆ ಅತೀವ ಜ್ಞಾನ ಉಳ್ಳವರು. ಅವರ ಸೇವೆಯನ್ನು ಸಂಸ್ಥೆ ಪಡೆದುಕೊಂಡಿದೆ. ಸಮಾಜದ ಕಾಳಜಿಯೊಂದಿಗೆ, ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರಂತಹ ಒಬ್ಬ ಉತ್ತಮ ಶಿಕ್ಷಕನನ್ನು ಸಂಸ್ಥೆ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್. ವಿದ್ಯಾವರ್ಧಕ ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಮತ್ತು ಸದಸ್ಯರು ಹಾಗೂ ಸಹ ಸಂಸ್ಥೆಗಳ ಸಂಚಾಲಕರು, ಪ್ರಾಚಾರ್ಯರು, ವಿಶ್ರಾಂತ ಪ್ರಾಚಾರ್ಯರು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ನುಡಿನಮನ ಸಲ್ಲಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ್ ನಿರೂಪಿಸಿದರು.
























