ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಹಾಡಹಗಲೇ ನಡೆದ ದರೋಡೆ ಕೃತ್ಯ
ಬೆಂಗಳೂರು : ಬೆಂಗಳೂರಿನಲ್ಲಿ ಹಾಡುಹಗಲೇ ಸಂಭವಿಸಿದ 7.11 ಕೋಟಿ ರೂ. ದರೋಡೆ ಪ್ರಕರಣ ಮಾಸ್ಟರ್ಮೈಂಡ್ ಓರ್ವ ಪೊಲೀಸ್ ಕಾನ್ಸ್ಟೆಬಲ್ ಎಂಬ ಶಂಕೆ ವ್ಯಕ್ತವಾಗಿದೆ. ಗೋವಿಂದಪುರ ಠಾಣೆಯ ಕಾನ್ಸ್ಟೆಬಲ್ ಅಣ್ಣಪ್ಪ ನಾಯ್ಕ್ ಎಂಬಾತನನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಅಣ್ಣಪ್ಪ ನಾಯ್ಕ್ ದರೋಡೆ ಸಂಚು ರೂಪಿಸಿದಾತ ಎನ್ನಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಈತನ ಪಾತ್ರ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ಗ್ಯಾಂಗ್ ರೆಡಿ ಮಾಡಿದ್ದ ಅಣ್ಣಪ್ಪ ನಾಯ್ಕ್ ದರೋಡೆ ಕುರಿತು ಪಕ್ಕಾ ತರಬೇತಿ ನೀಡಿದ್ದ. ಹೇಗೆ ರಾಬರಿ ಮಾಡಬೇಕು? ಹೇಗೆ ತಪ್ಪಿಸಿಕೊಳ್ಳಬೇಕೆಂದು ಟ್ರೈನಿಂಗ್ ಕೂಡ ಕೊಟ್ಟಿದ್ದ. ಪೊಲೀಸರು ಹೇಗೆ ಕೆಲಸ ಮಾಡುತ್ತಾರೆಂದು ಸಹ ತಿಳಿಸಿದ್ದ ಎನ್ನಲಾಗಿದೆ. ಅದರಂತೆ ಕಮ್ಮನಹಳ್ಳಿ, ಕಲ್ಯಾಣನಗರ ಹುಡುಗರ ತಂಡ 7.11 ಕೋಟಿ ರೂ. ದರೋಡೆ ಮಾಡಿದೆ. ಅಲ್ಲದೆ ಸಿಎಂಎಸ್ ಸೆಕ್ಯೂರಿಟಿ ಎಜೆನ್ಸಿಯ ಮಾಜಿ ಉದ್ಯೋಗಿಗಳು ದರೋಡೆಗೆ ಸಾಥ್ ಕೊಟ್ಟಿದ್ದು, ಕದ್ದ ಹಣವನ್ನು ಬೆಂಗಳೂರಲ್ಲಿಯೇ ಬಚ್ಚಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ದರೋಡೆಕೋರರ ಪತ್ತೆಗೆ ನಾಲ್ವರು ಜಂಟಿ ಪೊಲೀಸ್ ಆಯುಕ್ತರು, 18 ಡಿಸಿಪಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಇನ್ನೋವಾ ಕಾರು ಗುರುವಾರ ತಿರುಪತಿಯಲ್ಲಿ ಸಿಕ್ಕಿದೆ. ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮಧ್ಯೆ ಸಿದ್ದಾಪುರ ಪೊಲೀಸರು ಡೇವಿಡ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದರೋಡೆ ಕೃತ್ಯದಲ್ಲಿ ಶಾಮೀಲಾಗಿದ್ದ ವಿಜಯ್ ಬಳಿ ಇದ್ದದ್ದು ಇದೇ ಡೇವಿಡ್ನ ಬೈಕ್ ಎನ್ನಲಾಗಿದೆ. ಡೇವಿಡ್ನಿಂದ ಬೈಕ್ ಪಡೆದಿದ್ದ ವಿಜಯ್ ಎಂಬಾತ ಮತ್ತೊಬ್ಬ ವಿಜಯ್ ಎಂಬವನಿಗೆ ಬೈಕ್ ನೀಡಿದ್ದ.
ಸಿಎಂಎಸ್ ವಾಹನದಿಂದ ಇನ್ನೋವಾಗೆ ಹಣ ಶಿಫ್ಟ್ ಮಾಡಿದ್ದ ದರೋಡೆಕೋರರು, ನಕಲಿ ನಂಬರ್ ಪ್ಲೇಟ್ ಬಳಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಆ ನಂಬರ್ ಮೂಲ ಕೆದಕಿದಾಗ ಬೆಂಗಳೂರಿದ್ದೇ ಸ್ವಿಫ್ಟ್ ಕಾರು ಪತ್ತೆ ಆಗಿದೆ.
























