ಹಳೆ ಮನೆಯನ್ನು ಕೆಡವಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿ
ಮಂಗಳೂರು : ಸುರತ್ಕಲ್‌ನಲ್ಲಿ 2006ರಲ್ಲಿ ನಡೆದ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಓರ್ವ ಆರೋಪಿಯನ್ನು ಪೊಲೀಸರು ಬರೋಬ್ಬರಿ 19 ವರ್ಷಗಳ ಬಳಿಕ ಸೆರೆ ಹಿಡಿದಿದ್ದಾರೆ. ಡಿಸೆಂಬರ್ 1, 2006ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಸುಖಾನಂದ ಶೆಟ್ಟಿಯನ್ನು ಕಬೀರ್ ಮತ್ತು ಆತನ ಸಹಚರರು ಕೊಲೆ ಮಾಡಿದ್ದರು. ಇದು ಕರಾವಳಿಯಲ್ಲಿ ನಡೆದ ಮೊದಲ ಕೋಮುಹತ್ಯೆ ಪ್ರಕರಣವಾಗಿತ್ತು. ಕರಾವಳಿಯಲ್ಲಿ ನಂತರ ನಡೆದ ಅನೇಕ ಕೋಮು ಹಿಂಸಾಚಾರಗಳಿಗೆ ಇದೇ ಹತ್ಯೆ ಮೂಲ ಕಾರಣ ಎನ್ನಲಾಗುತ್ತಿದೆ.
ಅಬ್ದುಲ್ ಸಲಾಂ ಅಡ್ಡೂರ್ ಸೆರೆಯಾಗಿರುವ ಆರೋಪಿ. ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನವೆಂಬರ್ 18 ರಂದು ಸಂಜೆ ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಕಬೀರ್‌ಗೆ ಸಹೋದರರಾದ ಲತೀಫ್ ಅಲಿಯಾಸ್ ಅಡ್ಡೂರ್ ಲತೀಫ್ ಮತ್ತು ಅಬ್ದುಲ್ ಸಲಾಂ ಅಡ್ಡೂರ್ ತಮ್ಮ ಅಡ್ಡೂರ್ ಟಿಬೆಟ್ ಕಾಲೋನಿಯಲ್ಲಿರುವ ಮನೆಯಲ್ಲಿ ಎರಡು ದಿನಗಳ ಕಾಲ ಆಶ್ರಯ ನೀಡಿ ಬಂಧನದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು ಮತ್ತು ನಂತರ ಕಾಸರಗೋಡು ಬಳಿ ಅವನನ್ನು ತಲುಪಿಸಿ ಬಳಿಕ ಅಲ್ಲಿಂದ ಪರಾರಿಯಾಗಿದ್ದರು.
ಈಗ 47 ವರ್ಷ ವಯಸ್ಸಿನ ಅಬ್ದುಲ್ ಸಲಾಮ್ ಅಡ್ಡೂರು ಅಪರಾಧ ನಡೆದ ಮೂರು ತಿಂಗಳ ನಂತರ ದೇಶವನ್ನು ತೊರೆದಿದ್ದ. ಅಂದಿನಿಂದ ತಲೆಮರೆಸಿಕೊಂಡು ಸುಮಾರು 19 ವರ್ಷಗಳಿಂದ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ಅಬ್ದುಲ್ ಸಲಾಂ ಅಡ್ಡೂರು ಇತ್ತೀಚೆಗೆ ಮರಳಿದ ವಿಶ್ವಾಸಾರ್ಹ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಸುಳಿವಿನ ಮೇರೆಗೆ ಬಜ್ಪೆ ಪೊಲೀಸರ ತಂಡ ನವೆಂಬರ್ 18 ರಂದು ರಾತ್ರಿ 8 ಗಂಟೆ ಸುಮಾರಿಗೆ ಕಿನ್ನಿಪದವಿನಲ್ಲಿ ಆತನನ್ನು ಬಂಧಿಸಿದೆ.
2007ರಲ್ಲಿ ಪಾಸ್‌ಪೋರ್ಟ್ ಪಡೆದು ಹಲವು ವರ್ಷಗಳ ಕಾಲ ವಿದೇಶದಲ್ಲಿ ವಾಸಿಸುತ್ತಿದ್ದ ಆರೋಪಿ ಅಡ್ಡೂರು ನಿವಾಸವನ್ನು ಕೆಡವಿ ಕಿನ್ನಿಪದವಿನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅವನ ಸಹೋದರ ಲತೀಫ್ ಅಡ್ಡೂರು ವಿದೇಶದಲ್ಲಿಯೇ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣದಲ್ಲಿ 16 ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿದ್ದು, ಇನ್ನೂ 11 ಮಂದಿ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ. ಅಬ್ದುಲ್ ಸಲಾಮ್ ಅಡ್ಡೂರು ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆತನ ವಿರುದ್ಧ ರೌಡಿ ಶೀಟ್ ತೆರೆಯಲಾಗಿದೆ. ನ್ಯಾಯಾಲಯವು ಹಲವು ವರ್ಷಗಳಿಂದ ಆತನ ವಿರುದ್ಧ ಹಲವು ವಾರಂಟ್‌ಗಳನ್ನು ಹೊರಡಿಸಿತ್ತು.
ಸುಮಾರು ಎರಡು ದಶಕಗಳಿಂದ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾಗಿದ್ದರಿಂದ, ಬಜ್ಪೆ ಪೊಲೀಸರು ಬಿಎನ್‌ಎಸ್ ಸೆಕ್ಷನ್ 209ರ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಎಸಿಪಿ (ಉತ್ತರ ಉಪವಿಭಾಗ) ಶ್ರೀಕಾಂತ್ ಕೆ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿ, ಪಿಎಸ್‌ಐ ರಘು ನಾಯಕ್ ಮತ್ತು ಸಿಬ್ಬಂದಿ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ರಾಜೇಂದ್ರ ಪ್ರಸಾದ್, ವಿನೋದ್ ನಾಯಕ್ ಮತ್ತು ಸುನಿಲ್ ಕುಸನಾಲೆ ಅವರು ಬಂಧಿಸಿದ್ದಾರೆ.
























