ಹಾಡಹಗಲೇ ನಗರ ಮಧ್ಯದಲ್ಲಿ ನಡೆದ ದರೋಡೆ ಕೃತ್ಯದಿಂದ ಸರ್ಕಾರಕ್ಕೆಎ ತೀವ್ರ ಮುಜುಗರ
ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ಹಾಡಹಗಲೇ ನಡೆದ ಸಿನಿಮೀಯ ಶೈಲಿಯ ದರೋಡೆ ಕೃತ್ಯದಲ್ಲಿ ಸಿಎಂಎಸ್ ವಾಹನ ಚಾಲಕ ಮತ್ತು ಸಿಬ್ಬಂದಿ ಮೇಲೆಯೇ ಅನುಮಾನ ಮೂಡಿದೆ. ಎಟಿಎಂಗೆ ಹಣ ತುಂಬುವ ಸಿಎಂಎಸ್ ವಾಹನವನ್ನು ಅಡ್ಡಗಟ್ಟಿ 7 ಕೋಟಿ 11 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿರುವ ಘಟನೆಯಿಂದ ಬೆಂಗಳೂರು ನಗರ ಬೆಚ್ಚಿಬಿದ್ದಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಸರ್ಕಾರಕ್ಕೆ ಈ ದರೋಡೆ ಕೃತ್ಯದಿಂದ ಬಹಳ ಮುಜುಗರವಾಗಿದೆ.
ಬುಧವಾರ ಮಧ್ಯಾಹ್ನ 12.30ರ ವೇಳೆಗೆ ಎಟಿಎಂಗೆ ಹಣ ತುಂಬಲು ಹೋಗುತ್ತಿದ್ದ ಸಿಎಂಎಸ್ ವಾಹನವನ್ನು ದರೋಡೆಕೋರರು ಈನೊವಾ ಕಾರಲ್ಲಿ ಹಿಂಬಾಲಿಸಿ ಜಯನಗರದ ಅಶೋಕ ಪಿಲ್ಲರ್ ಬಳಿ ದರೋಡೆ ಮಾಡಿದ್ದಾರೆ. ಮೊದಲಿಗೆ ನಗರದ ಶ್ರೀಮಂತ ಬಡಾವಣೆಯಾದ ಜಯನಗರದ ಅಶೋಕ ಪಿಲ್ಲರ್ ಬಳಿ ಇನ್ನೋವಾ ಕಾರಿನಲ್ಲಿ ಬಂದ ದರೋಡೆಕೋರರ ಸಿಎಂಎಸ್ ವಾಹನವನ್ನು ಅಡ್ಟಗಟ್ಟಿದ್ದಾರೆ. ಬಳಿಕ ನಾವು ಕೇಂದ್ರದ ಟ್ಯಾಕ್ಸ್ ಆಫೀಸರ್, ನಿಮ್ಮ ವಾಹನ ಪರಿಶೀಲನೆ ಮಾಡಬೇಕು ಎಂದು ಹೇಳಿ ಕಾರಿನಲ್ಲಿದ್ದ ಬ್ಯಾಂಕ್ ಸಿಬ್ಬಂದಿಯನ್ನು ಕೆಳಕ್ಕೆ ಇಳಿಸಿ ಕಾರಿನ ಚಾಲಕನೊಂದಿಗೆ ಕಿದ್ವಾಯಿ ಆಸ್ಪತ್ರೆಯ ಡೈರಿ ಸರ್ಕಲ್ ಬಳಿ ಕರೆದೊಯ್ದು 7 ಕೋಟಿ 11 ಲಕ್ಷ ಹಣವನ್ನು ಲೂಟಿ ಮಾಡಿ ಎಸ್ಕೇಪ್ ಆಗಿದ್ದಾರೆ.
ದರೋಡೆಕೋರರ ಪತ್ತೆಗೆ ದಕ್ಷಿಣ ಡಿಸಿಪಿ ಲೋಕೇಶ್ ನೇತೃತ್ವದಲ್ಲಿ ಮೂರು ವಿಶೇಷ ತನಿಖಾ ತಂಡಗಳನ್ನ ರಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ದರೋಡೆಕೋರರ ಬಗ್ಗೆ ಕೆಲವು ಖಚಿತ ಸುಳಿವುಗಳು ಸಿಕ್ಕಿವೆ. ಶೀಘ್ರ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ಘಟನೆ ಬಳಿಕ ಸಿಎಂಎಸ್ ವಾಹನ ಚಾಲಕ, ಸಿಬ್ಬಂದಿ ಮೇಲೆಯೇ ಅನುಮಾನ ಮೂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸೆಕ್ಯುರಿಟಿ ಸೀನಿಯರ್ ಮ್ಯಾನೇಜರ್ ನಟರಾಜ್ ಪ್ರತಿಕ್ರಿಯಿಸಿ, ಮಧ್ಯಾಹ್ನ 12.21ಕ್ಕೆ ಜೆಪಿ ನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಸುಮಾರು 7 ಕೋಟಿ 11 ಲಕ್ಷ ಹಣ ತಗೊಂಡಿದ್ದಾರೆ. ಗೋವಿಂದರಾಜಪುರಂ ಬ್ರ್ಯಾಂಚ್‌ಗೆ ಹಣ ಹೋಗ್ತಾ ಇತ್ತು. ಇಬ್ಬರು ಗನ್ ಮ್ಯಾನ್, ಓರ್ವ ಡ್ರೈವರ್ ಹಾಗೂ ಓರ್ವ ಹ್ಯಾಂಡ್ಲರ್ ಇದ್ದರು. ಮಧ್ಯಾಹ್ನ 1 ಗಂಟೆ ವೇಳೆಗೆ ಬ್ರಾಂಚ್ ಮ್ಯಾನೇಜರ್‌ಗೆ ಕರೆ ಮಾಡಿದ್ದಾರೆ. ಬಳಿಕ ಡಿಜಿ ಕಂಟ್ರೋಲ್ ರೂಮ್‌ಗೆ, ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಹುಡುಕಾಟ ಮಾಡಿದ್ದಾರೆ. ಯಾಕೆ ತಡ ಆಯ್ತು ಅಂದ್ರೆ ದರೋಡೆಕೋರರು ಮೊಬೈಲ್ ಕಸಿದುಕೊಂಡಿದ್ದರು, ಹಣ ರಾಬರಿ ಮಾಡೋವರೆಗೂ ಮೊಬೈಲ್ ಕೊಟ್ಟಿಲ್ಲ. ಹೀಗಾಗಿ ಅವರು ಬ್ರ್ಯಾಂಚ್ ಮ್ಯಾನೇಜರ್‌ಗೂ ಮಾಹಿತಿ ನೀಡಲು ಆಗಿಲ್ಲ. ನಮಗೂ ಕೆಲ ಅನುಮಾನಗಳು ಇವೆ. ಅವರೆಲ್ಲ 7-8 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಈಗ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡ್ತಾ ಇದ್ದಾರೆ ಅಂತ ತಿಳಿಸಿದ್ದಾರೆ.
ಇನ್ನೋವಾ ಕಾರಿನಲ್ಲಿದ್ದ ದರೋಡೆಕೋರರು ಸಿಎಂಎಸ್ ವಾಹನವನ್ನ ಹಿಂಬಾಲಿಸಿದ್ದಾರೆ. ಹಲವು ಜಾಗಗಳಲ್ಲಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾರೆ. ಸೌತ್ ಎಂಡ್ ಸರ್ಕಲ್‌ನಿಂದ ಲಾಲ್ ಬಾಗ್ ರಸ್ತೆಯಲ್ಲಿ ಹಲವು ಬಾರಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾರೆ. ಕೊನೆಗೆ ಹಣವಿದ್ದ ಕಾರನ್ನು ಅಡ್ಡಗಟ್ಟಿ ನಾವೆಲ್ಲಾ ಆರ್‌ಬಿಐ ಅಧಿಕಾರಿಗಳು, ಕಾರಿನಲ್ಲಿ ಚಾಲಕ ಬಿಟ್ಟು ಎಲ್ಲರೂ ಕೆಳಗಿಳಿಯಿರಿ ಎಂದು ಹೇಳಿದ್ದಾರೆ. ಚಾಲಕನನ್ನು ಡೈರಿ ಸರ್ಕಲ್ ಕಡೆಗೆ ಕರೆತಂದಿದ್ದಾರೆ. ನಂತರ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ವಾಹನ ನಿಲ್ಲಿಸಿ ಐದೇ ನಿಮಿಷದಲ್ಲಿ ತಮ್ಮ ಭಾರತ ಸರ್ಕಾರ ನಾಮಫಲಕ ಹೊಂದಿದ್ದ ಕಾರಿಗೆ ಹಣವನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ.
ದರೋಡೆಕೋರರು ಭಾರತ ಸರ್ಕಾರ ಎಂಬ ನಾಮಫಲಕ ಹೊಂದಿದಂತಹ ಕೆಎ 03 ಎನ್‌ಸಿ-8052 ನಂಬರ್‌ನ ಇಂದಿರಾನಗರ ಆರ್‌ಟಿಒದಲ್ಲಿ ರಿಜಿಸ್ಟ್ರೇಷನ್ ಆಗಿರುವ ಇನ್ನೋವಾ ಕಾರನ್ನು ಬಳಸಿದ್ದಾರೆ. ಮೊದಲಿಗೆ ದರೋಡೆ ಮಾಡಲು 2 ಕಾರುಗಳನ್ನು ಬಳಕೆ ಮಾಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ, ಮೊದಲಿಗೆ ಸಿಲ್ವರ್ ಕಲರ್ ಜೆನ್ ಕಾರಲ್ಲಿ ರಾಬರಿಗೆ ಬಳಸಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿದ್ದಾರೆ. ಸ್ವಿಫ್ಟ್ ಕಾರಿನ ನಂಬರ್ ಪ್ಲೇಟ್ ಅನ್ನು ಇನ್ನೋವಾ ಕಾರಿಗೆ ಬಳಕೆ ಮಾಡಿದ್ದಾರೆ. ಬೆಂಗಳೂರಿನ ತಿಪ್ಪಸಂದ್ರ ವಿಳಾಸದಲ್ಲಿ ಪಿ.ಬಿ. ಗಂಗಾಧರನ್ ಎಂಬುವವರ ಹೆಸರಿನಲ್ಲಿ ನೊಂದಣಿಯಾಗಿರುವ ಕಾರಿನ ನಂಬರ್‌ನ್ನ ಬಳಸಿದ್ದಾರೆ.
ಎಟಿಎಂ ವಾಹನದಲ್ಲಿ ಒಟ್ಟು ನಾಲ್ಕು ಜನ ಸಿಎಂಎಸ್ ಸಿಬ್ಬಂದಿ ಇದ್ದರು. ಓರ್ವ ಡ್ರೈವರ್, ಇಬ್ಬರು ಗನ್ ಮ್ಯಾನ್ ಹಾಗೂ ಮತ್ತೊಬ್ಬ ಹಣ ಹಾಕುವ ಸಿಬ್ಬಂದಿ ಇದ್ದು, ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಇವರ ವಿಚಾರಣೆ ನಡೆಯುತ್ತಿದೆ.
ಸಿಎಂಎಸ್ ವಾಹನ ಚಾಲಕ ಬಿನೋದ್ ಘಟನೆಯ ವಿವರ ನೀಡಿದ್ದು, ನಾವು ವಾಹನದಲ್ಲಿ ನಾಲ್ಕು ಜನ ಬಂದ್ವಿ. ಅವರು ಕಾರಲ್ಲಿ ಐದಾರು ಜನ ಬಂದು ನಾವು ಆರ್ ಬಿಐ ನವರು ಎಂದು ಹೇಳಿದರು. ಸಿಎಂಎಸ್ ವಾಹನದಲ್ಲಿದ್ದ ಉಳಿದವರನ್ನ ತಮ್ಮ ಕಾರಲ್ಲಿ ಹತ್ತಿಸಿಕೊಂಡ್ರು. ನನ್ನನ್ನ ಸಿಎಂಎಸ್ ವಾಹನದಲ್ಲೇ ಕರೆದುಕೊಂಡು ಹೋಗಿ ಡೈರಿ ಸರ್ಕಲ್ ಬ್ರಿಡ್ಜ್ ಮೇಲೆ ನಿಲ್ಲಿಸಿದರು. ಬಳಿಕ ನನ್ನ ಫೋನ್ ಕಿತ್ತುಕೊಂಡಿದ್ದು, ವಾಹನದಲ್ಲಿದ್ದ ಹಣ ತಮ್ಮ ಕಾರಿಗೆ ಶಿಫ್ಟ್ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಖದೀಮರು ಪಕ್ಕಾ ಪ್ಲ್ಯಾನ್ ಮಾಡಿ ಈ ದರೋಡೆ ಮಾಡಿದ್ದಾರೆ. ಅಶೋಕ ಪಿಲ್ಲರ್‌ನಿಂದ ಸಿದ್ದಾಪುರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದರೋಡೆ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇಲ್ಲ ಎನ್ನಲಾಗಿದೆ. ಬೆಂಗಳೂರಿನಲ್ಲಿ ಹಾಡಹಾಗಲೇ ಕೋಟಿ ಕೋಟಿ ದರೋಡೆ ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಶಂಕಿತರ ಫೋಟೋ ಬಿಡುಗಡೆ ಮಾಡಿದೆ.
























