ವೈಟ್‌ ಕಾಲರ್‌ ಟೆರರ್‌ ಜಾಲದ ಉಗ್ರ ಡಾ.ಅಹ್ಮದ್‌ ಮೇಲೆ ಜೈಲಿನಲ್ಲಿ ಹಲ್ಲೆ

ಅಪಾಯಕಾರಿ ರಿಸಿನ್‌ ವಿಷ ತಯಾರಿಸಿ ಜನರನ್ನು ಸಾಯಿಸಲು ಸಂಚು ಮಾಡಿದ್ದ ಉಗ್ರ

ಅಹಮದಾಬಾದ್ : ರಿಸಿನ್ ಎಂಬ ಅತ್ಯಂತ ಅಪಾಯಕಾರಿ ವಿಷ ಪದಾರ್ಥದ ಮೂಲಕ ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಡಾ.ಅಹ್ಮದ್ ಮೊಹಿಯುದ್ದೀನ್ ಸಯ್ಯದ್ ಮೇಲೆ ಜೈಲಿನಲ್ಲಿ ಸಹಕೈದಿಗಳು ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ವೈಟ್‌ ಕಾಲರ್‌ ಟೆರರ್‌ ಜಾಲದ ಭಾಗವಾಗಿರುವ ಡಾ.ಅಹ್ಮದ್‌ನನ್ನು ಇತ್ತೀಚೆಗೆ ಹೈದರಾಬಾದ್​ನಿಂದ ಬಂಧಿಸಿ ಗುಜರಾತ್‌ನ ಸಬರಮತಿ ಜೈಲಿನಲ್ಲಿರಿಸಲಾಗಿತ್ತು.

ಜೈಲಿನಲ್ಲಿ ಕೈದಿಗಳ ನಡುವೆ ನಡೆದ ಗಲಾಟೆಯಲ್ಲಿ ಡಾ.ಅಹ್ಮದ್ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಭದ್ರತೆಯ ಸೆಲ್‌ನಲ್ಲಿದ್ದ ಕೈದಿಗಳು ಡಾ.ಅಹ್ಮದ್ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಹಠಾತ್ ದಾಳಿಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ, ಈ ಕುರಿತು ತನಿಖೆ ನಡೆಯುತ್ತಿದೆ.





















































 
 

ಮೂಲಗಳು ಹೇಳುವಂತೆ ಹೊಡೆತ ಎಷ್ಟು ತೀವ್ರವಾಗಿತ್ತೆಂದರೆ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಅವನ ಜೀವ ಉಳಿಸಬೇಕಾಯಿತು. ಸೆಲ್ ಹೊರಗೆ ನಿಂತಿದ್ದ ಕಾವಲುಗಾರರು ಗದ್ದಲ ಕೇಳಿದ ತಕ್ಷಣ ಧಾವಿಸಿ ಬಂದು ದಾಳಿಕೋರರಿಂದ ಅವನನ್ನು ದೂರ ಎಳೆದಿದ್ದಾರೆ.

ನವೆಂಬರ್ 8ರಂದು ಗುಜರಾತ್ ಎಟಿಎಸ್ ಡಾ. ಅಹ್ಮದ್‌ನನ್ನು ಇತರ ಇಬ್ಬರು ಶಂಕಿತ ಉಗ್ರರೊಂದಿಗೆ ಬಂಧಿಸಿತ್ತು. ಮಾರಕ ರಾಸಾಯನಿಕ ‘ರಿಸಿನ್’ ಅನ್ನು ತಯಾರಿಸುತ್ತಿದ್ದರು ಮತ್ತು ಅವರ ನಿರ್ವಾಹಕ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಆರೋಪಿಗಳನ್ನು ಡಾ. ಅಹ್ಮದ್ ಮೊಹಿಯುದ್ದೀನ್ ಸಯ್ಯದ್, ಆಜಾದ್ ಸುಲೇಮಾನ್ ಶೇಖ್ ಮತ್ತು ಮೊಹಮ್ಮದ್ ಸುಹೇಲ್ ಮೊಹಮ್ಮದ್ ಸಲೀಮ್ ಎಂದು ಗುರುತಿಸಲಾಗಿದೆ. ಇತರ ಇಬ್ಬರು ಬಂಧಿತ ಆರೋಪಿಗಳು ಲಖನೌ, ದೆಹಲಿ ಮತ್ತು ಅಹಮದಾಬಾದ್‌ನ ಹಲವಾರು ಸೂಕ್ಷ್ಮ ಸ್ಥಳಗಳಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಮುಂದಾಗಿದ್ದರು.

ಆರೋಪಿಗಳು ತಮ್ಮ ನಿರ್ವಾಹಕರು ಪಾಕಿಸ್ತಾನ ಗಡಿಯಾದ್ಯಂತ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ. ಈ ಸುಳಿವಿನ ಆಧಾರದ ಮೇರೆಗೆ ಕಾರ್ಯನಿರ್ವಹಿಸಿದ ಎಟಿಎಸ್ ತಂಡವು ನವೆಂಬರ್ 7 ರಂದು ಗಾಂಧಿನಗರದ ಅದಲಾಜ್ ಬಳಿ ಹೈದರಾಬಾದ್ ಮೂಲದ ಡಾ.ಅಹ್ಮದ್‌​​ನನ್ನು ಬಂಧಿಸಿತ್ತು.

ಆತನ ಬಳಿ ಇದ್ದ ಎರಡು ಪಿಸ್ತೂಲ್‌ಗಳು, ಒಂದು ಬೆರೆಟ್ಟಾ ಪಿಸ್ತೂಲ್, 30 ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ನಾಲ್ಕು ಲೀಟರ್ ಕ್ಯಾಸ್ಟರ್ ಆಯಿಲ್‌ ವಶಪಡಿಸಿಕೊಂಡಿತ್ತು. ಚೀನಾದಲ್ಲಿ ಎಂಬಿಬಿಎಸ್ ಪದವಿ ಪಡೆದ ಸೈಯದ್, ಪ್ರಮುಖ ಭಯೋತ್ಪಾದಕ ದಾಳಿಯನ್ನು ನಡೆಸಲು ‘ರಿಸಿನ್’ ಎಂಬ ಅತ್ಯಂತ ಮಾರಕ ವಿಷವನ್ನು ತಯಾರಿಸುತ್ತಿದ್ದ.

error: Content is protected !!
Scroll to Top