ಕಲಾವಿದರ ನೋವನ್ನು ಕಂಡು ಹೇಳಿಕೆ ನೀಡಿದ್ದೆ ಎಂದು ಸ್ಪಷ್ಟನೆ
ಬೆಂಗಳೂರು: ಯಕ್ಷಗಾನ ಕಲಾವಿದರಿಗೆ ನಾನು ಅವಮಾನ ಮಾಡಿಲ್ಲ. ನನ್ನ ಹೇಳಿಕೆಯಿಂದ ಬೇಸರವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ತನ್ನ ಹೇಳಿಕೆ ವಿವಾದವಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು, ಈಗ ಸಲಿಂಗಕಾಮ ಇಲ್ಲ. 60-70 ರ ದಶಕದಲ್ಲಿದ್ದಾಗ ಇದು ಯಕ್ಷಗಾನದಲ್ಲಿ ಇತ್ತು. ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ್ದನ್ನು ಹೇಳಿದ್ದೇನೆ. ಯಾರನ್ನೂ ನೋಯಿಸುವ ಉದ್ದೇಶದಿಂದ ಈ ಹೇಳಿಕೆಯನ್ನು ನಾನು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಕಳೆದ 30 ವರ್ಷಗಳಿಂದ ಯಕ್ಷಗಾನವನ್ನು ಮಾಡುತ್ತಾ ಬಂದಿದ್ದೇನೆ. ಈಗಲೂ ತಾಳಮದ್ದಳೆಯಲ್ಲಿ ಅರ್ಥವನ್ನು ಹೇಳುತ್ತಿದ್ದೇನೆ. ನನಗೆ ಯಕ್ಷಗಾನದ ಬಗ್ಗೆ ಬಹಳಷ್ಟು ಗೌರವವಿದೆ. ಹಿಂದೆ ರಾತ್ರಿಯಿಡೀ ಯಕ್ಷಗಾನ ನಡೆಯುತ್ತಿತ್ತು. ಒಮ್ಮೆ ಮೇಳಕ್ಕೆ ಹೊರಟರೆ 6 ತಿಂಗಳ ನಂತರ ಕಲಾವಿದರು ಮನೆಗೆ ಬರುತ್ತಿದ್ದರು. ಸ್ತ್ರೀ ವೇಷಧಾರಿಗಳಿಗೆ ಆಗುತ್ತಿದ್ದ ನೋವನ್ನು ಹೇಳಿದ್ದೇನೆ. ಈಗ ಯಕ್ಷಗಾನ ಸಂಜೆ ಆರಂಭವಾಗಿ ರಾತ್ರಿ ಮುಕ್ತಾಯವಾಗುತ್ತದೆ. ಕಾಲಮಿತಿಯಲ್ಲಿ ಯಕ್ಷಗಾನ ಮುಕ್ತಾಯವಾಗುತ್ತಿರುವ ಕಾರಣ ಕಲಾವಿದರು ರಾತ್ರಿಯೇ ಮನೆಗೆ ಬರುತ್ತಿದ್ದಾರೆ ಎಂದು ವಿವರಿಸಿದ್ದಾರೆ.
























