ಯಾತ್ರೆ ಆರಂಭದ ದಿನದಿಂದಲೇ ಸಾಲುಗಟ್ಟಿ ಬರುತ್ತಿರುವ ಅಯ್ಯಪ್ಪ ವ್ರತಧಾರಿಗಳು
ಶಬರಿಮಲೆ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಮಂಡಲ-ಮಕರ ವಿಳಕ್ಕು ಯಾತ್ರೆ ಸೋಮವಾರದಿಂದ ವಿಧ್ಯುಕ್ತವಾಗಿ ಆರಂಭವಾಗಿದ್ದು, ಆರಂಭದಿಂದಲೇ ಸಿಕ್ಕಾಪಟ್ಟೆ ದಟ್ಟಣೆಯಿದೆ. ಮೊದಲ ದಿನವೇ 1.36 ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆದರು. ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಸ್ಥಳೀಯ ಪೊಲೀಸರು ಹೆಣಗಾಡುತ್ತಿದ್ದಾರೆ.
ಆನ್‌ಲೈನ್ ಮತ್ತು ಸ್ಪಾಟ್ ಬುಕ್ಕಿಂಗ್ ಎಂಬೆರಡು ಸೌಲಭ್ಯಗಳ ಮೂಲಕ ಮಾತ್ರ ದರ್ಶನಕ್ಕೆ ಅವಕಾಶ ಇದ್ದರೂ ಭಕ್ತರು ಅನಿಯಮಿತವಾಗಿ ಬರುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ದಟ್ಟಣೆ ನಿಭಾಯಿಸಲು ಕೇರಳ ಸರ್ಕಾರ ಕೇಂದ್ರೀಯ ಪಡೆಗಳನ್ನು ಕಳುಹಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಇಂದಿನಿಂದ ಸ್ಪಾಟ್ ಬುಕ್ಕಿಂಗ್ ಮೇಲೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ. ಯಾವುದೇ ಕಾರಣಕ್ಕೂ 20,000 ಭಕ್ತರಿಗೆ ಮೇಲ್ಪಟ್ಟು ಸ್ಪಾಟ್ ಬುಕ್ಕಿಂಗ್ ನೀಡುವುದಿಲ್ಲ ಎಂದು ದೇವಸ್ವಂ ಬೋರ್ಡ್ ಹೇಳಿದೆ. ಭಕ್ತರ ಅನುಕೂಲಕ್ಕಾಗಿ ಇನ್ನೂ ಏಳು ಬುಕ್ಕಿಂಗ್ ಕೇಂದ್ರಗಳನ್ನು ತೆರೆಯಲು ದೇವಸ್ವಂ ಬೋರ್ಡ್ ಅಧಿಕಾರಿಗಳಿಗೆ ಸೂಚಿಸಿದೆ. ವರ್ಚುವಲ್ ಬುಕ್ಕಿಂಗ್‌ನಲ್ಲಿ 70,000 ಮತ್ತು ಸ್ಪಾಟ್ ಬಿಕ್ಕಿಂಗ್‌ನ 20,000 ಭಕ್ತರಿಗೆ ಮಾತ್ರ ಇನ್ನು ದರ್ಶನ ಅವಕಾಶ ಸಿಗಲಿದೆ.
ಭಾನುವಾರ ಸಂಜೆಯೇ ದೇಗುಲದ ಬಾಗಿಲು ತೆರೆಯಲಾಗಿದ್ದು, ಸೋಮವಾರದಿಂದ 41 ದಿನಗಳ ಮಂಡಲ ಯಾತ್ರೆಗೆ ಚಾಲನೆ ನೀಡಲಾಯಿತು. ಈ ಸಮಯದಲ್ಲಿ ಲಕ್ಷಾಂತರ ಮಂದಿ ಯಾತ್ರೆ ಕೈಗೊಂಡು ದೇಗುಲಕ್ಕೆ ಭೇಟಿ ನೀಡಲಿದ್ದಾರೆ.
ಈ ನಡುವೆ ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿನ್ನಲೇಪಿತ ಕವಚಗಳ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ವೈಜ್ಞಾನಿಕ ಪರೀಕ್ಷೆಗಾಗಿ ಕವಚಗಳನ್ನು ಸೋಮವಾರ ಕಳಚಿದ್ದಾರೆ. ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧಿಕಾರಿಗಳ ಸಮ್ಮುಖದಲ್ಲಿ ಸೋಮವಾರ ಮಧ್ಯಾಹ್ನ 1.15ಕ್ಕೆ ಕವಚಗಳನ್ನು ಕಳಚಲಾಯಿತು. 3 ಗಂಟೆವರೆಗೂ ಈ ಕಾರ್ಯ ಮುಂದುವರಿಯಿತು. ಆ ಬಳಿಕ ಅವುಗಳನ್ನು ಮತ್ತೊಂದು ಕೋಣೆಗೆ ಸ್ಥಳಾಂತರಿಸಿ, ತೂಕ ಮಾಡಲಾಯಿತು. ನಂತರ ಅವುಗಳ ಮಾದರಿಯನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳಿಸಲಾಯಿತು.
























