ವೈಟ್ ಕಾಲರ್ ಟೆರರ್ ಜಾಲದ ಕೇಂದ್ರವಾಗಿದ್ದ ವಿವಿಯ ಸ್ಥಾಪಕ
ನವದೆಹಲಿ: ದೆಹಲಿಯ ಕೆಂಪುಕೋಟೆ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿಯನ್ನು ನ್ಯಾಯಾಲಯ ಡಿಸೆಂಬರ್ 1ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.
ದೆಹಲಿ ಸ್ಫೋಟ ಮತ್ತು ವೈಟ್ ಕಾಲರ್ ಉಗ್ರ ಜಾಲದ ಹಿಂದಿನ ಭಯೋತ್ಪಾದಕ ಘಟಕದ ಕೇಂದ್ರ ಬಿಂದುವಾಗಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದ ಸ್ಥಾಪಕ ಜವಾದ್ ಅಹ್ಮದ್ ಸಿದ್ದಿಕಿಯನ್ನು ಮಂಗಳವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಪಡಿಸಿದ್ದರು.
ಇದೀಗ ಅಹ್ಮದ್ ಸಿದ್ದಿಕಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಡಿಸೆಂಬರ್ 1 ರವರೆಗೆ ಅಂದರೆ ಒಟ್ಟು 13 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.
ಭಯೋತ್ಪಾದನಾ ಹಣಕಾಸು ಸಂಬಂಧಿತ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ್ದ ಇಡಿ ಅಧಿಕಾರಿಗಳು ಇಂದು ಜವಾದ್ ಅಹ್ಮದ್ ಸಿದ್ದಿಕಿಯನ್ನು ಮಂಗಳವಾರ ಬಂಧಿಸಿದ್ದರು.
ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಅಲ್ ಫಲಾಹ್ ವಿವಿಯ ಹಲವಾರು ವೈದ್ಯರು ಸೆರೆಯಾಗಿದ್ದು, ಇ ವಿವಿಯೇ ವೈಟ್ ಕಾಲರ್ ಟೆರರ್ ಜಾಲದ ಕೇಂದ್ರ ಸ್ಥಾನ ಎನ್ನಲಾಗಿದೆ.
13 ಜನರ ಸಾವು ಮತ್ತು ಹಲವರು ಗಾಯಗೊಳ್ಳಲು ಕಾರಣವಾಗಿದ್ದ ಈ ಸ್ಫೋಟದಲ್ಲಿ ಆತ್ಮಹತ್ಯಾ ಬಾಂಬರ್ ಆಗಿದ್ದ ಕಾಶ್ಮೀರಿ ನಿವಾಸಿ ಡಾ. ಉಮರ್ ಉನ್ ನಬಿ ಇದೇ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕನಾಗಿದ್ದ.
ಫರಿದಾಬಾದ್ನ ಎರಡು ಬಾಡಿಗೆ ಕೊಠಡಿಗಳಿಂದ ಸುಮಾರು 2,900 ಕೆಜಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡು ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವೈದ್ಯರು ಮತ್ತು ಫರಿದಾಬಾದ್ನ ಮಸೀದಿಗೆ ಸಂಬಂಧಿಸಿದ ಧರ್ಮಗುರು ಸೇರಿದಂತೆ ಹಲವಾರು ವ್ಯಕ್ತಿಗಳನ್ನು ಬಂಧಿಸಲಾಯಿತು.
ಈ ನಡುವೆ ಕಾರು ಸ್ಫೋಟ ಘಟನೆ ಬೆನ್ನಲ್ಲೇ ಜವಾಬ್ದಾರಿ ಮರೆತ ಕೆಲ ಮಾಧ್ಯಮಗಳು ಸ್ಫೋಟಕ ತಯಾರಿಸುವ ಕುರಿತು ವರದಿ ಪ್ರಕಟಿಸಿದ್ದು, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೂಚನೆಗಳನ್ನು ನೀಡಿದ್ದು, ಕಾನೂನುಬಾಹಿರ ಚಟುವಟಿಕೆಗಳಿಗೆ ಸಹಾಯ ಮಾಡುವ, ಪ್ರೋತ್ಸಾಹಿಸುವ ಅಥವಾ ಉತ್ತೇಜಿಸುವ ದೃಶ್ಯಗಳನ್ನು ಪ್ರಸಾರ ಮಾಡದಂತೆ ಎಚ್ಚರಿಕೆ ನೀಡಿದೆ.
ಕೆಲವು ಸುದ್ದಿ ವಾಹಿನಿಗಳು ಕೆಂಪುಕೋಟೆ ಸ್ಫೋಟಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಸಂಬಂಧಿಸಿದ ವಿಷಯವನ್ನು ಪ್ರಸಾರ ಮಾಡುತ್ತಿವೆ. ಈ ಮೂಲಕ ಹಿಂಸಾಚಾರವನ್ನು ಸಮರ್ಥಿಸುತ್ತಿವೆ. ಜೊತೆಗೆ ಸ್ಫೋಟಕ ವಸ್ತುಗಳನ್ನು ಹೇಗೆ ತಯಾರಿಸುವುದು ಎಂಬುದರ ಕುರಿತಂತೆಯೂ ಮಾಹಿತಿ ವೀಡಿಯೊಗಳನ್ನು ಪ್ರಸಾರ ಮಾಡುತ್ತಿವೆ ಎಂಬುದು ಸಚಿವಾಲಯದ ಗಮನಕ್ಕೆ ಬಂದಿದೆ.
ಅಂತಹ ಪ್ರಸಾರಗಳು ಹಿಂಸಾಚಾರವನ್ನು ಪ್ರೋತ್ಸಾಹಿಸಬಹುದು ಅಥವಾ ಪ್ರಚೋದಿಸಬಹುದು, ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸಬಹುದು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡಬಹುದು. ಅಂತಹ ವಿಷಯಗಳ ಬಗ್ಗೆ ವರದಿ ಮಾಡುವಾಗ ವಿವೇಚನೆ ಮತ್ತು ಸೂಕ್ಷ್ಮತೆಯಿಂದಿರಬೇಕೆಂದು ಒತ್ತಾಯಿಸಿದೆ.
























