ಭಾರತವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ ಶೇಖ್‌ ಹಸೀನಾ ಮರಣದಂಡನೆ ತೀರ್ಪು

ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದ ಮಾಜಿ ಪ್ರಧಾನಿಯನ್ನು ಗಡಿಪಾರು ಮಾಡಲಾಗುತ್ತದೆಯೇ?

ನವದೆಹಲಿ : ಬಾಂಗ್ಲಾದೇಶದ ದೇಶಭ್ರಷ್ಟ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರಿಗೆ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಿ ಬಾಂಗ್ಲಾದ ನ್ಯಾಯಾಲಯ ಮರಣದಂಡನೆ ವಿಧಿಸಿದ ತೀರ್ಪು ಭಾರತವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

ಕಳೆದ ವರ್ಷ ಜುಲೈ-ಆಗಸ್ಟ್ ತಿಂಗಳಲ್ಲಿ ನಡೆದ ವಿದ್ಯಾರ್ಥಿ ಹೋರಾಟದ ಸಂದರ್ಭದಲ್ಲಿ ನಡೆದ ಹಿಂಸಾಚಾರ ಮತ್ತು ನರಮೇಧಕ್ಕೆ ಸಂಬಂಧಿಸಿದಂತೆ ಢಾಕಾದ ಅಂತಾರಾಷ್ಟ್ರೀಯ ಅಪರಾಧಗಳ ಟ್ರಿಬ್ಯೂನಲ್‌ ಈ ಐತಿಹಾಸಿಕ ತೀರ್ಪನ್ನು ನೀಡಿದೆ. ಪ್ರಸ್ತುತ ಶೇಖ್‌ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ಮತ್ತು ಇಲ್ಲಿ ಸುರಕ್ಷಿತವಾಗಿದ್ದಾರೆ. ಈಗ ನೆರೆ ರಾಷ್ಟ್ರ ಅವರನ್ನು ಗಡಿಪಾರು ಮಾಡುವಂತೆ ವಿನಂತಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಉಭಯ ಸಂಕಟದಲ್ಲಿ ಸಿಲುಕಿದೆ.





















































 
 

ಬಾಂಗ್ಲಾದ ಗಡಿಪಾರಿಗೆ ಪ್ರತಿಕ್ರಿಯಿಸಿರುವ ಭಾರತ ಬಾಂಗ್ಲಾದ ಹಿತಾಸಕ್ತಿಗೆ ಭಾರತ ಧಕ್ಕೆ ತರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದು, ಈ ಹಿನ್ನೆಲೆಯಲ್ಲಿ ಭಾರತದ ಮುಂದಿನ ನಡೆ ಏನು ಎನ್ನುವ ಕುತೂಹಲ ಹುಟ್ಟು ಹಾಕಿದೆ.

ಕಳೆದ ವರ್ಷ ಬಾಂಗ್ಲಾದಲ್ಲಿ ದಂಗೆ ಭುಗಿಲೆದ್ದಾಗ ಭಾರತಕ್ಕೆ ಪಲಾಯನ ಮಾಡಿ ಬಂದಿದ್ದ ಶೇಖ್‌ ಹಸೀನಾಗೆ ಭಾರತ ಸರ್ಕಾರ ಆಶ್ರಯ ಕೊಟ್ಟಿದೆ. ಈಗ ಬಾಂಗ್ಲಾದ ಬೇಡಿಕೆಯಂತೆ ಅವರನ್ನು ಗಡಿಪಾರು ಮಾಡಿದರೆ ಹಸೀನಾಗೆ ದ್ರೋಹ ಮಾಡಿದಂತೆ ಆಗುತ್ತಿದೆ. ತಾನೇ ಕೈಯಾರೆ ಸಾವಿನ ಕೈಗೆ ಕೊಟ್ಟ ಅಪವಾದವನ್ನು ಭಾರತ ಹೊತ್ತುಕೊಳ್ಳಬೇಕಾಗುತ್ತದೆ. ಗಡಿಪಾರು ಮಾಡದಿದ್ದರೆ ಬಾಂಗ್ಲಾದ ನ್ಯಾಯಾಲಯದ ತೀರ್ಪನ್ನು ಗೌರವಿಸಿಲ್ಲ ಎಂಬ ಆರೋಪಕ್ಕೆ ಗುರಿಯಾಗಬೇಕಟಾಗುತ್ತದೆ. ಇದು ಉಭಯ ದೇಶಗಳ ನಡುವೆ ಗಂಭೀರವಾದ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆಯಿದೆ.

ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರ ಅನುಪಸ್ಥಿತಿಯಲ್ಲೇ ಈ ತೀರ್ಪು ಹೊರಬಿದ್ದಿದೆ. ಅದು ಕೂಡ ಶೇಖ್‌ ಹಸೀನಾ ಅವರ ವಿವಾಹ ವಾರ್ಷಿಕೋತ್ಸವ ದಿನವೇ ಅವರನ್ನು ಗಲ್ಲಿಗೇರಿಸುವ ತೀರ್ಪ ಬಂದಿರುವುದು ವಿಪರ್ಯಾಸ. ಶೇಕ್‌ ಹಸೀನಾ ಭಾರತದಲ್ಲಿರುವುದರಿಂದ ಬಾಂಗ್ಲಾದೇಶ ಮತ್ತು ಭಾರತದ ನಡುವೆ ದೊಡ್ಡ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಶೇಖ್‌ ಹಸೀನಾ ಅವರು ಬಾಂಗ್ಲಾದೇಶದ ಭೌತಶಾಸ್ತ್ರಜ್ಞ ಎಂ.ಎ ವಾಜೆದ್ ಮಿಯಾ ಅವರನ್ನು ವಿವಾಹವಾಗಿರುವ ದಿನ ನ.೧೭. ಅಂದೇ ಅವರನ್ನು ಗಲ್ಲಿಗೇರಿಸುವ ತೀರ್ಪನ್ನು ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದೆ. ಈ ಕುರಿತಾಗಿ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ನವೆಂಬರ್ 17ನ್ನು ಹಸೀನಾ ಅವರ ಮರಣದಂಡನೆ ದಿನಾಂಕವಾಗಿ ಉದ್ದೇಶಪೂರ್ವಕವಾಗಿ ನಿಗದಿಪಡಿಸಲಾಗಿದೆ ಎಂದು ಒಂದು ವರ್ಗ ಆರೋಪಿಸಿದೆ. ವಿಚಾರಣೆಯು ಅಕ್ಟೋಬರ್ 23ರಂದು ಮುಕ್ತಾಯಗೊಂಡಿತು ಮತ್ತು ಮೂಲತಃ ಶಿಕ್ಷೆಯನ್ನು ನವೆಂಬರ್ 14ರಂದು ಪ್ರಕಟಿಸಲು ನಿರ್ಧರಿಸಲಾಗಿತ್ತು. ಆದರೆ ನವೆಂಬರ್ 17 ಅವರ ವಿವಾಹವಾರ್ಷಿಕ ದಿನವಾಗಿರುವುದರಿಂದ ಈ ದಿನವನ್ನು ಉದ್ದೇಶಪೂರ್ವಕವಾಗಿ ಆಯ್ದುಕೊಳ್ಳಲಾಗಿದೆ ಏನ್ನಲಾಗುತ್ತಿದೆ.

ಶೇಖ್ ಹಸೀನಾ ಬಾಂಗ್ಲಾದೇಶದ ಸ್ಥಾಪಕ ಪಿತಾಮಹರಲ್ಲಿ ಒಬ್ಬರಾದ ಶೇಖ್ ಮುಜಿಬುರ್ ರೆಹಮಾನ್ ಅವರ ಎರಡನೇ ಪುತ್ರಿಯಾಗಿದ್ದು,ಅವರು ನವೆಂಬರ್ 17, 1967 ರಂದು ವಾಜೀದ್ ಮಿಯಾ ಅವರನ್ನು ವಿವಾಹವಾದರು. ನಂತರ ವಾಜೀದ್ ಬಾಂಗ್ಲಾದೇಶ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷರಾದರು. ಅವರು ಶೇಖ್ ಮುಜಿಬುರ್ ರೆಹಮಾನ್ ಅವರ ಕುರಿತಾದ ಒಂದು ಪುಸ್ತಕ ಸೇರಿದಂತೆ ಭೌತಶಾಸ್ತ್ರ ಮತ್ತು ರಾಜಕೀಯದ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಶೇಖ್ ಹಸೀನಾ ಮತ್ತು ವಾಜೀದ್ ಮಿಯಾ ದಂಪತಿಗೆ ಸಜೀಬ್ ವಾಜೀದ್ ಜಾಯ್ ಎಂಬ ಮಗ ಮತ್ತು ಸೈಮಾ ವಾಜೀದ್ ಪುಟುಲ್ ಎಂಬ ಮಗಳಿದ್ದಾರೆ. ವಾಜೀದ್ ಮಿಯಾ ಮೇ 2009 ರಲ್ಲಿ ನಿಧನರಾದರು. ಅದಾದ ಸ್ವಲ್ಪ ಸಮಯದ ನಂತರ, ಜನವರಿಯಲ್ಲಿ ಶೇಖ್ ಹಸೀನಾ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

error: Content is protected !!
Scroll to Top