ಹುಬ್ಬಳ್ಳಿಯ ಓರ್ವ ವ್ಯಕ್ತಿಯೂ ಸಾವು
ನವದೆಹಲಿ : ಸೌದಿ ಅರೇಬಿಯಾದ ಮಕ್ಕಾ ಮತ್ತು ಮದೀನಾ ನಡುವೆ ಸೋಮವಾರ ನಸುಕಿನ ವೇಳೆ ಸಂಭವಿಸಿದ ಬಸ್ ಅಪಘಾತದಲ್ಲಿ ಒಟ್ಟು 45 ಮಂದಿ ಭಾರತೀಯರು ಸಾವನ್ನಪ್ಪಿದ್ದು, ಈ ಪೈಕಿ ಓರ್ವ ಕನ್ನಡಿಗ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಸೌದಿ ಅರೇಬಿಯಾದ ಮೆಕ್ಕಾ-ಮದೀನಾ ರಸ್ತೆಯಲ್ಲಿ ಬಸ್ ಹಾಗೂ ಡೀಸಿಲ್ ಟ್ಯಾಂಕರ್ ನಡುವೆ ಡಿಕ್ಕಿಯಾದ ರಭಸಕ್ಕೆ ಬಸ್ ಹೊತ್ತಿ ಉರಿದಿತ್ತು. ದುರ್ಘಟನೆಯಲ್ಲಿ 45 ಮಂದಿ ಭಾರತೀಯರು ಸಜೀವ ದಹನವಾಗಿದ್ದಾರೆ.
ಬಸ್ಸಿನಲ್ಲಿದ್ದ 46 ಜನರಲ್ಲಿ 43 ಮಂದಿ ಹೈದರಾಬಾದ್ನವರು, ಇಬ್ಬರು ಸೈಬರಾಬಾದ್ನವರು ಮತ್ತು ಓರ್ವ ಕರ್ನಾಟಕದ ಹುಬ್ಬಳ್ಳಿಯವರು ಎಂದು ತಿಳಿದುಬಂದಿದೆ. ಹುಬ್ಬಳ್ಳಿಯ ಅಬ್ದುಲ್ ಗನಿ ಶಿರಪಟ್ಟಿಯವರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದಬಂದಿದೆ.
ದುಬೈನ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ಅಬ್ದುಲ್ 30 ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದರು. 2 ತಿಂಗಳ ಹಿಂದಷ್ಟೇ ಹುಬ್ಬಳ್ಳಿಗೆ ಬಂದು ವಾಪಸಾಗಿದ್ದರು. ನ.9ರಂದು ದುಬೈನಿಂದ ಸೌದಿಗೆ ಹೋಗಿದ್ದರು.
ಮೃತದೇಹಗಳು ಸಂಪೂರ್ಣವಾಗಿ ಸುಟ್ಟುಹೋಗಿರುವುದರಿಂದ ಸೌದಿ ಅರೇಬಿಯಾದಲ್ಲೇ ಸಮಾಧಿ ಮಾಡಲು ನಿರ್ಧರಿಸಲಾಗಿದೆ. ಕುಟುಂಬಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸರ್ಕಾರದಿಂದ ಸಹಾಯವನ್ನು ಕೋರಿವೆ.
























