ಟೆಕ್ಕಿ ಮಹಿಳೆಯನ್ನೇ ಡಿಜಿಟಲ್‌ ಅರೆಸ್ಟ್‌ ಖೆಡ್ಡಾಕ್ಕೆ ಕೆಡವಿ 31.83 ಕೋ.ರೂ. ದೋಚಿದ ಸೈಬರ್‌ ಖದೀಮರು

ರಾಜ್ಯದ ಅತಿದೊಡ್ಡ ಸೈಬರ್‌ ವಂಚನೆಗೆ ಬಲಿಪಶುವಾದ ವಿದ್ಯಾವಂತ ಮಹಿಳೆ

ಬೆಂಗಳೂರು : ಡಿಜಿಟಲ್ ಅರೆಸ್ಟ್ ವಂಚನೆಗೆ ಒಳಗಾಗಿ ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಬರೋಬ್ಬರಿ 31.83 ಕೋಟಿ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಇದು ಕರ್ನಾಟಕದಲ್ಲೇ ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ವ್ಯಕ್ತಿಯೊಬ್ಬರು ಕಳೆದುಕೊಂಡ ಗರಿಷ್ಠ ಮೊತ್ತ ಎಂಬುದಾಗಿ ಪೊಲೀಸ್ ಮೂಲಗಳು ಹೇಳಿವೆ.

ಇಂದಿರಾನಗರದ ನಿವಾಸಿ 57 ವರ್ಷ ವಯಸ್ಸಿನ ಮಹಿಳಾ ಟೆಕ್ಕಿಯನ್ನು ಸೈಬರ್ ಪಾತಕಿಗಳು ಆರು ತಿಂಗಳಿಗೂ ಹೆಚ್ಚು ಕಾಲ ನಿರಂತರ ಡಿಜಿಟಲ್‌ ಅರೆಟ್ಸ್‌ನಲ್ಲಿರಿಸಿ ಹಣ ದೋಚಿ ನಂತರ ಸಂಪರ್ಕ ಕಡಿತಗೊಳಿಸಿದ್ದಾರೆ. 2024ರ ಸೆಪ್ಟೆಂಬರ್ 15ರಂದು ಮಹಿಳೆಗೆ ಡಿಎಚ್​ಎಲ್​ ಕೊರಿಯರ್‌ನಿಂದ ಏಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಮಹಿಳೆಯ ಹೆಸರಿನಲ್ಲಿ ಮೂರು ಕ್ರೆಡಿಟ್ ಕಾರ್ಡ್‌ಗಳು, ನಾಲ್ಕು ಪಾಸ್‌ಪೋರ್ಟ್‌ಗಳು ಮತ್ತು ನಿಷೇಧಿತ MDMA ಮಾದಕ ದ್ರವ್ಯಗಳನ್ನು ಒಳಗೊಂಡಿರುವ ಒಂದು ಪ್ಯಾಕೇಜ್ ಮುಂಬೈನ ಅಂಧೇರಿಯಲ್ಲಿರುವ ಡಿಎಚ್​ಎಲ್​ ಕೇಂದ್ರಕ್ಕೆ ಬಂದಿದೆ ಎಂದು ಹೇಳಿದ್ದಾನೆ. ಆದರೆ, ತಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಕೊರಿಯರ್ ಜೊತೆ ಯಾವುದೇ ಸಂಪರ್ಕವಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಆಗ, ಫೋನ್ ಸಂಖ್ಯೆ ಪ್ಯಾಕೇಜ್‌ಗೆ ಲಿಂಕ್ ಆಗಿರುವುದರಿಂದ ಇದು ಸೈಬರ್ ಅಪರಾಧವಾಗಿರಬಹುದು ಎಂದು ಕರೆ ಮಾಡಿದವ ಹೇಳಿಕೊಂಡಿದ್ದಾನೆ. ಈ ವಿಷಯದ ಬಗ್ಗೆ ಸೈಬರ್ ಅಪರಾಧ ಸೆಲ್​ಗೆ ದೂರು ನೀಡುವಂತೆ ಆಕೆಯನ್ನು ಕೇಳಿಕೊಂಡಿದ್ದಾನೆ. ಆಕೆ ಪ್ರತಿಕ್ರಿಯಿಸುವ ಮೊದಲು, ಕರೆಯನ್ನು ಸಿಬಿಐ ಅಧಿಕಾರಿಯ ಸೋಗಿನಲ್ಲಿರುವ ವ್ಯಕ್ತಿಗೆ ವರ್ಗಾಯಿಸಲಾಗಿತ್ತು.





















































 
 

ನಂತರ, ಮಹಿಳೆಯ ಗುರುತನ್ನು ದುರುಪಯೋಗಪಡಿಸಿಕೊಂಡ ಸೈಬರ್ ವಂಚಕರು ಆಕೆಯ ಮೇಲೆ ನಿಗಾ ಇಡುತ್ತಿದ್ದಾರೆ ಎಂದು ಹೇಳಿ, ಸ್ಥಳೀಯ ಪೊಲೀಸರನ್ನು ಸಂಪರ್ಕಿಸದಂತೆ ಅಥವಾ ಕಾನೂನು ಸಹಾಯ ಪಡೆಯದಂತೆ ಆಕೆಗೆ ಎಚ್ಚರಿಕೆ ನೀಡಿದ್ದಾರೆ. ಆಕೆಗೆ ಮಾಹಿತಿ ನೀಡಿದರೆ ಆಕೆಯ ಕುಟುಂಬವನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿಯೂ ಅವರು ಬೆದರಿಕೆ ಹಾಕಿದ್ದರು. ಮಗನ ಮದುವೆ ಸಮೀಪಿಸುತ್ತಿದ್ದರಿಂದ ವಂಚಕರ ಬೆದರಿಕೆಗೆ ಹೆದರಿದ್ದ ಸಂತ್ರಸ್ತೆ ವಂಚಕರು ಹೇಳಿದ ರೀತಿಯಲ್ಲೇ ನಡೆದುಕೊಂಡಿದ್ದರು.

ಅದಾದ ನಂತರ ಕೆಲವು ದಿನಗಳ ಬಳಿಕ ಸ್ಕೈಪ್ ವಿಡಿಯೋ ಕರೆಯ ಮೂಲಕ ಸಂತ್ರಸ್ತೆಯನ್ನು ‘ಗೃಹಬಂಧನ’ಕ್ಕೆ ಒಳಪಡಿಸಲಾಯಿತು. ನಂತರ, ಸಿಬಿಐ ಅಧಿಕಾರಿ ಪ್ರದೀಪ್ ಸಿಂಗ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ರಾಹುಲ್ ಯಾದವ್ ಎಂಬ ಇನ್ನೊಬ್ಬ ವ್ಯಕ್ತಿಗೆ ಒಂದು ವಾರದ ಕಾಲ ಆಕೆಯನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಿದ. ಈ ಸಮಯದಲ್ಲಿ, ಸಂತ್ರಸ್ತೆ ವರ್ಕ್ ಫ್ರಂ ಹೋಮ್​ನಲ್ಲಿದ್ದರು.

2024ರ ಸೆಪ್ಟೆಂಬರ್ 23ರಂದು, ಆರ್‌ಬಿಐನ ಹಣಕಾಸು ಗುಪ್ತಚರ ಘಟಕ (ಎಫ್‌ಐಯು)ಕ್ಕೆ ಆಸ್ತಿಗಳನ್ನು ಘೋಷಿಸುವಂತೆ ಮಹಿಳೆಗೆ ಪ್ರದೀಪ್ ಸಿಂಗ್ ಸೂಚಿಸಿದ್ದ. ಅದರಂತೆ ಮಹಿಳೆ ನಡೆದುಕೊಂಡಿದ್ದರು. ನಂತರ ವಂಚಕರು ಹಂತಹಂತವಾಗಿ ಹಣ ವಸೂಲಿ ಮಾಡಿದ್ದರು.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ವಂಚಕರ ಸೂಚನೆಯಂತೆ ಸಂತ್ರಸ್ತೆ ತನ್ನ ಫಿಕ್ಸೆಡ್ ಡಿಪಾಸಿಟ್​​ಗಳನ್ನು ಹೊರತುಪಡಿಸಿ ಇತರ ಉಳಿತಾಯ ಹಣ 31.83 ಕೋಟಿ ರೂ.ಗಳನ್ನು 187 ವಹಿವಾಟುಗಳಲ್ಲಿ ವಂಚಕರಿಗೆ ವರ್ಗಾಯಿಸಿದ್ದಾಳೆ. 2025ರ ಫೆಬ್ರವರಿ ಒಳಗೆ ಪರಿಶೀಲನೆ ಮಾಡಿದ ನಂತರ ಹಣವನ್ನು ಹಿಂತಿರುಗಿಸಲಾಗುವುದು ಎಂದು ಸಂತ್ರಸ್ತೆಗೆ ನಕಲಿ ತನಿಖಾ ಅಧಿಕಾರಿಗಳು ಭರವಸೆ ನೀಡಿದ್ದರು. ಅಲ್ಲದೆ, ಸಂತ್ರಸ್ತೆಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೂಡ ಕೊಟ್ಟಿದ್ದರು. ಆದರೆ, ಹಣವನ್ನು ವಾಪಸ್ ನೀಡಲು ವಂಚಕರು ಒಂದಲ್ಲ ಒಂದು ಅಡ್ಡಿ ಹೇಳುತ್ತಲೇ ಇದ್ದರು. ನಂತರ ಅನುಮಾನಗೊಂಡ ಸಂತ್ರಸ್ತೆ ಬೆಂಗಳೂರು ಪೂರ್ವ ಸೈಬರ್ ಕ್ರೈಮ್ ಪೊಲೀಸರಿಗೆ 2025ರ ನವೆಂಬರ್ 14 ರಂದು ದೂರು ನೀಡಿದ್ದರು. ಅದರಂತೆ ಎಫ್​ಐಆರ್ ದಾಖಲಿಸಿರುವ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.

ಮಗನ ಮದುವೆ ಮತ್ತು ಇತರ ಕಾರಣಗಳಿಂದ ಹೆದರಿ ದೂರು ದಾಖಲಿಸುವುದು ವಿಳಂಬವಾಗಿದೆ ಎಂದು ಸಂತ್ರಸ್ತೆಯು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

error: Content is protected !!
Scroll to Top